ನೈಸ್ ಅಕ್ರಮ: ಸಿಎಂಗೆ ದೇವೇಗೌಡರ ಪತ್ರ

ಯಾವುದೇ ಆದೇಶ ನೀಡದಂತೆ ಹೈಕೋರ್ಟ್‌ಗೆ ಅಡ್ವೊಕೇಟ್ ಜನರಲ್ ಮನವಿ ಮಾಡಬೇಕೆಂದು...
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ

ಬೆಂಗಳೂರು: ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈ ಹಂತದಲ್ಲಿ ಯಾವುದೇ ಆದೇಶ ನೀಡದಂತೆ ಹೈಕೋರ್ಟ್‌ಗೆ ಅಡ್ವೊಕೇಟ್ ಜನರಲ್ ಮನವಿ ಮಾಡಬೇಕೆಂದು ಸಂಸದ ಎಚ್.ಡಿ.ದೇವೆಗೌಡ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ, ಕೆಐಎಡಿಬಿ ಸೇರಿ ಹಲವು ಅಧಿಕಾರಿಗಳ ವಿರುದ್ಧ ನೈಸ್ ಸಂಸ್ಥೆ ಹೂಡಿರುವ ನ್ಯಾಯಾಂಗ ನಿಂದನೆ ಪ್ರಕರಣ ಡಿ.17ಕ್ಕೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅಕ್ರಮದ ತನಿಖೆ ಸದನ ಸಮಿತಿಯಿಂದ ನಡೆಯುತ್ತಿರುವಾಗ ಹೈಕೋರ್ಟ್‌ನಿಂದ ಯಾವುದೇ ಆದೇಶ ಬಂದಲ್ಲಿ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.

ನೈಸ್‌ಗೆ 554 ಎಕರೆ ಹೆಚ್ಚುವರಿ ಭೂಮಿ ನೀಡಿದ ಅಕ್ರಮಕ್ಕೆ ಆಧಾರವಿಲ್ಲ ಎಂದು ಈ ಹಿಂದೆ ಹೈಕೋರ್ಟ್ ಹೇಳಿದಾಗ ರಾಜ್ಯ ಸರ್ಕಾರದ ಪರವಾಗಿ ಯಾರೂ ಹಾಜರಿರಲಿಲ್ಲ. ವಿಶೇಷ ವಕೀಲ ಸಂದೀಪ ಪಾಟೀಲ್ ಹಾಜರಾಗದೇ ಸರ್ಕಾರದ ಪರವಾಗಿ ವಾದ ಮಂಡಿಸುವವರು ಇಲ್ಲದಂತಾಗಿತ್ತು.

ಈ ಬಾರಿ ಅಡ್ವೊಕೇಟ್ ಜನರಲ್ ಹಾಜರಿದ್ದು, ಯಾವುದೇ ಆದೇಶ ನೀಡದಂತೆ ಮನವಿ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿರುವಾಗಲೇ ದಾಖಲೆ ನಾಶ ಮಾಡಿದ್ದಾರೆ. ಒಪ್ಪಂದದ ಪ್ರಕಾರ ರಸ್ತೆಗಾಗಿ ವಶಪಡಿಸಿಕೊಂಡ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ.

ಮಾತ್ರವಲ್ಲ ಒಪ್ಪಂದಕ್ಕೆ ವಿರುದ್ಧವಾಗಿ ಸಂಸ್ಥೆಗೆ ಹೆಚ್ಚುವರಿ ಭೂಮಿ ನೀಡಲಾಗಿದೆ. ಈ ಬಗ್ಗೆ ಕೋರ್ಟ್‌ಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದಾಗ, ಹೆಚ್ಚುವರಿ ಭೂಮಿ ಕೇಳಿಲ್ಲ ಎಂದು ನೈಸ್ ಪ್ರಮಾಣಪತ್ರ ನೀಡಿತ್ತು. ಹೆಚ್ಚುವರಿ ಭೂಮಿ ನೀಡಿರುವುದನ್ನು ಹಿಂದಿನ ಇಬ್ಬರು ಮುಖ್ಯಮಂತ್ರಿಗಳೂ ದೃಢೀಕರಿಸಿದ್ದಾರೆ. ಆದರೂ ಸಂಸ್ಥೆ ನಕಲಿ ದಾಖಲೆಗಳನ್ನು ಪ್ರದರ್ಶಿಸುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com