
ಬೆಂಗಳೂರು: ರಾಜ್ಯದ ಹಲವೆಡೆ ನಡೆದಿದ್ದ ಚರ್ಚ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಂಟು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿ ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರಿನ ಜೆ.ಜೆ.ನಗರದ ಸೇಂಟ್ ಪೀಟರ್ ಮತ್ತು ಪೌಲ್ ಚರ್ಚ್, ಕಲಬುರಗಿಯ ಸೇಂಟ್ ಆನ್ಸ್ ಕ್ಯಾಥೋಲಿಕ್ ಚರ್ಚ್ ಹಾಗೂ ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್ ಜಾನ್ ಲೂಥರ್ ಚರ್ಚ್‌ನಲ್ಲಿ ಜುಲೈ 2000ರಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು.
ವಿದ್ರೋಹದಲ್ಲಿ ಭಾಗಿಯಾಗಿದ್ದ ಒಟ್ಟು 22 ಅಪರಾಧಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಎಂಟು ಮಂದಿಗೆ ಆಪರೂಪದ ಪ್ರಕರಣ ಎಂದು ಪರಿಗಣಿಸಿ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ, ಉಳಿದ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ರತ್ನಕಲಾ ಅವರಿದ್ದ ವಿಭಾಗೀಯ ಪೀಠ, ವಿಶೇಷ ನ್ಯಾಯಾಲಯದ ಆದೇಶವನ್ನು ಭಾಗಶಃ ಎತ್ತಿ ಹಿಡಿದು ಎಂಟು ಜನರಿಗೆ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿ ಆದೇಶಿಸಿದೆ.
ಉಳಿದ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದೆ. ಪ್ರಕರಣದಲ್ಲಿ ಭಾಗಿ ಆದವರಲ್ಲಿ ವಾಯು ಪಡೆ, ರೈಲ್ವೆ ಇಲಾಖೆ, ಎಪಿಎಸ್‌ಆರ್‌ಟಿ ನೌಕರರೂ ಭಾಗಿಯಾಗಿದ್ದರು. ಸದ್ಯ ಅವರೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮುಸ್ಲಿಂರಿಗೆ ಇದು ಪಾಠ: ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಧರ್ಮ ಪ್ರಚಾರಕ್ಕೆ ಅವಕಾಶವಿದೆ. ಆದರೆ ಅದರರ್ಥ ಬಲವಂತವಾಗಿ, ಹೇಯ ಕೃತ್ಯ ನಡೆಸುವ ಮೂಲಕ ಮತಾಂತರಗೊಳಿಸುವುದಲ್ಲ. ಈ ರೀತಿ ಸಂವಿಧಾನದ ಹಕ್ಕನ್ನು ಲಾಭವಾಗಿ ಪಡೆದುಕೊಂಡು ಧರ್ಮ ಪ್ರಚಾರಕ್ಕೆ ಕಾನೂನು ಬಾಹಿರ ಮಾರ್ಗ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ.
ದೀನ್‌ದಾರ್ ಅಂಜುಮಾನ್ ಸಂಘಟನೆ ಈ ರೀತಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಲಾಗಿದೆ. ಈ ರೀತಿ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಕೃತ್ಯ ಹಾಗೂ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುಸ್ಲಿಂ ಯುವಕರಿಗೆ ಇದು ಪಾಠವಾಗಬೇಕು. ಕೆಲವು ಮುಸ್ಲಿಮರು ಈ ರೀತಿ ಕೃತ್ಯಗಳಲ್ಲಿ ಭಾಗವಹಿಸುವುದರಿಂದ ಇಡಿ ಮುಸ್ಲಿಂ ಧರ್ಮಕ್ಕೆ ಮಸಿ ಬಳಿದಂತಾಗುತ್ತದೆ. ಆದ್ದರಿಂದ ಈ ತೀರ್ಪು ಮುಸ್ಲಿಂ ಯುವಕರಿಗೆ ಪಾಠವಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಘಟನೆ ಹಿನ್ನೆಲೆ: ದೇಶದಲ್ಲಿ ಶಾಂತಿ ಭಂಗ ಹಾಗೂ ಸಮಾಜದ ಸ್ವಾಸ್ಥ್ಯ ಕದಲುವ ಉದ್ದೇಶದಿಂದ 2000ರ ಜುಲೈನಲ್ಲಿ ರಾಜ್ಯದ ಹಲವೆಡೆಗಳಲ್ಲಿ 'ದೀನ್ ದಾರ್ ಅಂಜುಮಾನ್ ಸಂಘಟನೆ' ಬಾಂಬ್ ಸ್ಫೋಟ ನಡೆಸಿ ದೇಶವನ್ನೈ ಬೆಚ್ಚಿ ಬೀಳಿಸಿತ್ತು.
200ರ ಜು.9ರಂದು ಬೆಂಗಳೂರಿನ ಜೆಜೆ ನಗರದ ಸೇಂಟ್ ಪೀಟರ್ ಮತ್ತು ಪಾಲ್ ಚರ್ಚ್‌ನಲ್ಲಿ ರಾತ್ರಿ ವೇಳೆ 10.15ರ ವೇಳೆಗೆ ಬಾಂಬ್ ಸ್ಫೋಟಿಸಲಾಗಿತ್ತು. ಅದೇ ರೀತಿ, 200ರ ಜು.8ರಂದು ಕಲಬುರಗಿಯ ವಾಡಿಯಲ್ಲಿ ಸೇಂಟ್ ಆನ್ಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಮುಂಜಾನೆ 6.30 ಹಾಗೂ 9.30ರಲ್ಲಿ ಬಾಂಬ್ ಸ್ಫೋಟಗೊಂಡಿತ್ತು.
ನಂತರ ಹುಬ್ಬಳಿಯ ಕೇಶ್ವಾಪುರದ ಸೇಂಟ್ ಜಾನ್ ಲೂಥರನ್ ಚರ್ಚ್‌ನಲ್ಲಿ 200ರ ಜುಲೈ 8 ರಂದು ಮುಂಜಾನೆ 3.30 ಹಾಗೂ 4.30ರ ವೇಳೆಗೆ ಸಂಚು ರೂಪಿಸಿ ಬಾಂಬ್ ಸ್ಫೋಟಿಸಲಾಗಿತ್ತು.
Advertisement