
ಬೆಂಗಳೂರು: ಇನ್ನು ಮುಂದೆ ದ್ವಿಚಕ್ರ ವಾಹನ ಚಾಲಕರಿಗೆ ರಾಜ್ಯಾದ್ಯಂತ್ಯ ಹೆಲ್ಮೆಟ್ ಕಡ್ಡಾಯಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ರಸ್ತೆ ಸಾರಿಗೆಯ ಸುರಕ್ಷತೆಯ ಬಗ್ಗೆ ಕಟುವಾದ ಕ್ರಮಗಳನ್ನು ತೆಗೆದುಕೊಳ್ಳಲು ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಈಗ ಸರ್ಕಾರದ ಅಂತಿಮ ಅನುಮತಿಯಷ್ಟೆ ಬಾಕಿ ಇರುವುದು.
ಸದ್ಯದ ನಿಯಮಗಳ ಪ್ರಕಾರ, ನಗರಸಭೆಯ ವ್ಯಾಪ್ತಿಯಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಕಾನೂನು ಇದೆ. ಆದರೆ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಈಗ ಇಲಾಖೆ ಇದೇ ನಿಯಮವನ್ನು ತಾಲ್ಲೂಕು, ಹೋಬಳಿ, ಗ್ರಾಮಾಂತರ ವ್ಯಾಪ್ತಿಗೂ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಕಡ್ಡಾಯ ಮಾಡಲು ನಿರ್ಧರಿಸಿದೆ.
"ಇದನ್ನು ಜನವರಿ ಮೊದಲ ವಾರದಿಂದ ಜಾರಿಗೆ ತರಬೇಕೆಂದಿದ್ದೇವೆ. ಆ ವಾರವನ್ನು ಸುರಕ್ಷಿತ ರಸ್ತೆ ಸಪ್ತಾಹವಾಗಿ ಆಚರಿಸುತ್ತಿದ್ದೇವೆ. ರಸ್ತೆ ಸುರಕ್ಷಿತತೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಕೇಂದ್ರ ಸರ್ಕಾರದಿಂದಲೂ ನಮಗೆ ಮಾರ್ಗದರ್ಶಕ ಸೂಚನೆಗಳು ಬಂದಿವೆ" ಎಂದು ಸಾರಿಗೆ ಇಲಾಖೆಯ ಆಯುಕ್ತ ರಾಮೇಗೌಡ ತಿಳಿಸಿದ್ದಾರೆ.
ಅಲ್ಲದೆ ಹಿಂಬದಿ ದ್ವಿಚಕ್ರ ವಾಹನ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ ಮಾಡಲು ಇಲಾಖೆ ಚಿಂತಿಸುತ್ತಿದೆ ಎಂದು ರಾಮೇಗೌಡ ತಿಳಿಸಿದ್ದಾರೆ.
Advertisement