
ಮೈಸೂರು: ಮೈಸೂರು ರಾಜವಂಶಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಜಯಚಾಮರಾಜ ಒಡೆಯರ್ ಅವರ ಪುತ್ರಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯತ್ರಿದೇವಿ ಅವರ ಮಗಳ ಮಗ ಯದುವೀರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಳೆದ ವರ್ಷದ ಡಿ.10ರಂದು ನಿಧನದ ಬಳಿಕ ಉತ್ತರಾಧಿಕಾರಿ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚದುರಂಗ ಕಾಂತರಾಜೇ ಅರಸ್ ಅವರು ಉತ್ತರ ಕ್ರಿಯೆಗಳನ್ನು ನೆರವೇರಿಸಿದ್ದರು. ನಾಡಹಬ್ಬ ದಸರಾ ಮಹೋತ್ಸವದ ಕಾರಣಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ಕುತೂಹಲ ಮೂಡಿಸಿತ್ತು. ಆದರೆ ಉತ್ತರಾಧಿಕಾರಿ ನೇಮಕ ವಿಳಂಬವಾಯಿತು.
ಕಳೆದ ದಸರೆಯಲ್ಲಿ ಖಾಸಗಿ ದರ್ಬಾರ್‌ನಲ್ಲಿ ಯಾರೂ ಸಿಂಹಾಸನವೇರಲಿಲ್ಲ. ಪಟ್ಟದ ಕತ್ತಿಯನ್ನಿಟ್ಟು ಪೂಜೆ ನೆರವೇರಿಸಲಾಗಿತ್ತು. ಈಗ ಯದುವೀರ ಅವರನ್ನೇ ಮೈಸೂರು ರಾಜಮನೆತನದ ಉತ್ತರಾಧಿಕಾರಿಯಾಗಿ ನೇಮಿಸುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಗಾಯತ್ರಿ ದೇವಿ ಅವರ ಪುತ್ರ ಚದುರಂಗ ಕಾಂತರಾಜೆ ಅರಸ್ ಅವರನ್ನೇ ಉತ್ತರಾಧಿಕಾರಿಯಾಗಿ ನೇಮಿಸುವ ಸುದ್ದಿ ಇತ್ತು. ಅಲ್ಲದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತಿಮ ವಿಧಿವಿಧಾನವನ್ನು ಅವರೇ ನಡೆಸಿದ್ದರು ಎಂಬ ಕಾರಣಕ್ಕೆ ಅವರೇ ಮುಂದಿನ ಉತ್ತರಾಧಿಕಾರಿ ಎಂದು ಹೇಳಲಾಗಿತ್ತು. ಆದರೆ ಯದುವಂಶದ ನಿಯಮದಂತೆಯೇ ಉತ್ತರಾಧಿಕಾರಿ ನೇಮಕ ಆಗಬೇಕು. ಚದುರಂಗ ಕಾಂತರಾಜ ಅರಸ್‌ಗೆ ಈಗಗಾಲೇ ಮದುವೆ ಆಗಿರುವುದರಿಂದ ನಿಯಮದಂತೆ ಅವರು ಉತ್ತರಾಧಿಕಾರಿಯಾಗಲು ಅರ್ಹರಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಪ್ರಮೋದಾದೇವಿ ಒಡೆಯರ್ ಅವರು ಯದುವೀರ ಅವರನ್ನೇ ಉತ್ತರಾಧಿಕಾರಿ ಸ್ಥಾನಕ್ಕೆ ನೇಮಿಸುವ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಅರಮನೆಯ ಆಪ್ತ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement