
ಬೆಂಗಳೂರು: ಆಡುಗೋಡಿ ಪೊಲೀಸರು ೨೩ ವರ್ಷದ ಸರಣಿ ಕಳ್ಳನನ್ನು ಬಂಧಿಸಿ ಅವನಿಂದ ೮ ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಆಪಾದಿತ ಮೊಹಮದ್ ರಾಫ್ ಕೇರಳ ಮೂಲದವನು. ಕದ್ದ ಡೆಬಿಟ್ ಕಾರ್ಡ್ ಒಂದನ್ನು ಎಟಿಎಂನಲ್ಲಿ ಬಳಸಿ, ತನ್ನ ಸಂಬಂಧಿತನ ಮದುವೆಗೆ ಹೋಗುವಾಗ ಪೊಲೀಸರು ಇವನನ್ನು ಹಿಡಿದಿದ್ದಾರೆ.
ನವೆಂಬರ್ ನಲ್ಲಿ ಬಸವೇಶ್ವರನಗರದ ನಿವಾಸಿ ಅಶೋಕ್ ಎಂಬುವವರ ಮನೆಗೆ ಕನ್ನ ಹಾಕಿ ಲ್ಯಾಪ್ ಟಾಪ್ ಮತ್ತು ಡೆಬಿಟ್ ಕಾರ್ಡ್ ಕದ್ದು ಓಡಿಹೋಗಿದ್ದ.
ರಾಫ್ ಕನ್ನೂರಿನ ಬಳಿಯ ಎಟಿಎಂ ಒಂದರಲ್ಲಿ ಡೆಬಿಟ್ ಕಾರ್ಡ್ ಬಳಸಿದಾಗ ಅಶೋಕ್ ಅವರಿಗೆ ಎಸ್ ಎಂ ಎಸ್ ಬಂದಿದೆ. ಅಶೋಕ್ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ದೃಷ್ಯಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ, ಇವನನ್ನು ಹಿಂದೆ ೨೦೧೩ ರಲ್ಲಿ ಮನೆಯೊಂದರಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲಿ ಬಂಧಿಸಿದ್ದು ಗೊತ್ತಾಗಿದೆ. ಇದರ ಹಿನ್ನಲೆಯಲ್ಲಿ ಅವನನ್ನು ಹಿಡಿಯಲಾಗಿದೆ. ನಗರದ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಾಫ್, ಒಂದೂವರೆ ವರ್ಷದ ಕೆಳಗೆ ಕೆಲಸ ಬಿಟ್ಟು ತನ್ನ ಹುಟ್ಟೂರು ಕೇರಳದ ಮಾಲೂರಿಗೆ ತೆರಳಿದ್ದ.
ಕನ್ನ ಹಾಕಲೆಂದೆ ನಗರಕ್ಕೆ ಆಗಾಗ್ಗೆ ಬರುತ್ತಿದ್ದ ಮೊಹಮದ್, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಅಂತಹ ಮನೆಗಳಿಗೆ ರಾತ್ರಿಯ ಸಮಯದಲ್ಲಿ ಕನ್ನ ಹಾಕುತ್ತಿದ್ದ. ನಗರದಾದ್ಯಂತ ಸುಮಾರು ೧೦ ಕಳ್ಳತನದ ಪ್ರಕರಣಗಳಲ್ಲಿ ಇವನು ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement