ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ

ಕೈಗಾರಿಕೆಗಳ ಅಭಿವೃದ್ಧಿಗೆ ಕೆಐಎಡಿಬಿ ಸ್ವಾಧೀನ ಪಡೆದುಕೊಳ್ಳುವ ಭೂಮಿಯಲ್ಲಿ ಶೇ. 20ರಷ್ಟು ಭೂಮಿಯನ್ನು ಸಣ್ಣ ಕೈಗಾರಿಕೆಗಳ...
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ  ನಿಗಮ ಆಯೋಜಿಸಿದ್ದ ಸುವರ್ಣ ಮಹೋತ್ಸವ  ಸಮಾರಂಭ ಉದ್ಘಾಟಿಸುತ್ತಿರುವ ಸಿಎಂ  ಸಿದ್ಧರಾಮಯ್ಯ
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸುತ್ತಿರುವ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕೈಗಾರಿಕೆಗಳ ಅಭಿವೃದ್ಧಿಗೆ ಕೆಐಎಡಿಬಿ ಸ್ವಾಧೀನ ಪಡೆದುಕೊಳ್ಳುವ ಭೂಮಿಯಲ್ಲಿ ಶೇ. 20ರಷ್ಟು ಭೂಮಿಯನ್ನು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.

ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ  ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ  ನಿಗಮ ಮಂಗಳವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಿದೆ. ಸಣ್ಣ ಕೈಗಾರಿಕಾ ವಲಯದ ಬೇಡಿಕೆಯಂತೆ ಈಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಕ್ಕೆ ಪಡೆಯುವ ಭೂಮಿಯಲ್ಲಿ ಶೇ. 20ರಷ್ಟು ಭೂಮಿಯನ್ನು ಸಣ್ಣ ಕೈಗಾರಿಕೆಗಳಿಗೆ ನೀಡಲಾಗುವುದು ಎಂದರು.

ಕೈಗಾರಿಕಾ ವಸಾಹತುಗಳನ್ನು 99 ವರ್ಷಗಳ ಲೀಜ್ ಮಾದರಿಯಲ್ಲಿ ಬಾಡಿಗೆಗೆ ನೀಡುವ ಸರ್ಕಾರದ ಕೈಗಾರಿಕಾ ನೀತಿಯನ್ನು ಬದಲಿಸಬೇಕು. ಕನಿಷ್ಠ ಹತ್ತು ವರ್ಷಗಳ ಅವಧಿಗೆ ಇದನ್ನು ಕಡಿಮೆ ಮಾಡಬೇಕೆಂದು  ಸಮಾರಂಭದಲ್ಲಿ ಕೈಗಾರಿಕೆಗಳ ಮಾಲೀಕರು ಮುಂದಿಟ್ಟ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು ನೆರೆಯ ಆಂಧ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಇರುವ ಮಾದರಿಗಳನ್ನು ಪರಿಶೀಲಿಸಿ, ಶೀಘ್ರವೇ ಸೂಕ್ತ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.

ಮತ್ತೆ ಬಂದರೂ ಆಶ್ಚರ್ಯ ಇಲ್ಲ; ಹೀರೋ ಮೋಟಾರ್ಸ್ ಎತ್ತಂಗಡಿ ವಿಚಾರದಲ್ಲಿ ಅಪಪ್ರಚಾರ ಮಾಡಲಾಗಿದೆ. ಆದರೆ, ಆ ಸಂಸ್ಥೆ ಬಾರೀ ನಿರೀಕ್ಷೆಯೊಂದಿಗೆ ತೆಲಂಗಾಣತ್ತೆ ಹೋಗಿ ಈಗ  ಬೇಸತ್ತಿದೆ. ಕೇಂದ್ರದ ವಿಶೇಷ ಪ್ಯಾಕೇಜ್ ಕನಸು ತೆಲಂಗಾಣಕ್ಕೆ ನನಸಾಗದೆ ಉಳಿದಿದೆ. ತೆಲಂಗಾಣಕತ್ಕೆ ವಿಶೇಷ ಪ್ಯಾಕೇಜ್ ನೀಡುವುದಾದರೆ, ರಾಜ್ಯದ ಹೈದರಾಬಾದ್ ಮತ್ತು ಮುಂಬ ಕರ್ನಾಟಕಕ್ಕೂ ನೀಡುವಂತೆ ಸರ್ಕಾರ ಮನವಿ ಮಾಡಿದೆ. ಹೀಗಾಗಿ ಈಗ ಹೀರೋ ಮೋಟಾರ್ಸ್ ಮತ್ತೆ ರಾಜ್ಯಕ್ಕೆ ಬಂದರೂ ಅಚ್ಚರಿ  ಪಡಬೇಕಿಲ್ಲ ಎಂದು ಸಿದ್ಧರಾಮಯ್ಯ ಟೀಕಕಾರರಿಗೆ ತಿರುಗೇಟು ನೀಡಿದರು.

ಕೈಗಾರಿಕೆ ಸ್ಥಾಪನೆ ಅನಿವಾರ್ಯ: ದೇಶದ ಜಿಡಿಪಿಗೆ  ಒಂದು ಕಾಲದಲ್ಲಿ ಕೃಷಿ ವಲಯವೇ ಮುಖ್ಯವಾಗಿತ್ತು. ಆದರೆ, ಈಗದ ಕೃಷಿ ವಲಯ ಕಡಿಮೆಯಾಗಿದೆ. ಜನರು ಕೃಷಿ ಬಿಟ್ಟು ಪಟ್ಟಣಕ್ಕೆ ವಲಸೆ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ನಿರುದ್ಯೋಗ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗ ಸಿಗಬೇಕಾದರೆ, ಸಣ್ಣ ಕೈಗಾರಿಕೆಗಳು ಹೆಚ್ಚಾಗಬೇಕು ಎಂದರು.

ನಮ್ಮ ಜತೆ ನೀವಿರಿ: ರಾಜ್ಯದಲ್ಲಿ ಕೈಗಾರಿಕೆಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕ ಪಡಬೇಕಿಲ್ಲ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಕೈಗಾರಿಕಾ ನೀತಿ ದೇಶದಲ್ಲಿಯೇ ಪ್ರಗತಿದಾಯಕವಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿದರೆ, ಹೆಚ್ಚಿನ ಉತ್ತೇಜನ ನೀಡಲಾಗುವುದು. ನಮ್ಮ ಜತೆ ನೀವಿರಿ, ನಿಮ್ಮ ಜತೆ ನಾವಿರುತ್ತೇವೆ ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.

ವೇದಿಕೆಯಲ್ಲಿ ಸಚಿವರಾದ ರೋಷನ್ ಬೇಗ್, ಕೆ.ಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್, ವಿಧಾನ ಪರಿಷತ್ ಮುಖ್ಯ ಸಚೇತಕ ಆರ್ ವಿ ವೆಂಕಟೇಶ್, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಎಂ ಪಠಾಣ್, ಕರ್ನಾಟಕ ಕೈಗಾರಿಕೆಗಳ ಮಹಾ ಒಕ್ಕೂಟದ ಅಧ್ಯಕ್ಷ ಸಂಪತ್ ರಾಮನ್, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಚಿದಾನಂದ ರಾಜಮಾನೆ, ವಾಣಿಜ್ಯ ಮತ್ತು ಕೈಗಾರಿಕೆ  ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಜರಿದ್ದರು. ಇದೇ ವೇಳೆ ಕೈಗಾರಿಕೆ ನಿಗಮದ ಪ್ರಗತಿಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com