
ಮಂಗಳೂರು: ಮುಂಬೈ ವಿಮಾನ ನಿಲ್ದಾಣ ಪೊಲೀಸರ ವಶದಲ್ಲಿರುವ ಉಡುಪಿ ಮೂಲದ ಡಾನ್ ರವಿ ಪೂಜಾರಿ ಪತ್ನಿ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಿ ಬಂಧನಕ್ಕೆ ಸ್ಕೆಚ್ ಹಾಕಿದ್ದು ಮಂಗಳೂರು ಪೊಲೀಸರು!
ಪೂಜಾರಿ ಪತ್ನಿ ಪದ್ಮಾ ಶ್ರೀದೇವಿ ತನ್ನ ಹೆಸರನ್ನು ಶ್ರೀದೇವಿ ಸಂತೋಷ್ ಪೂಜಾರಿ ಎಂದು ಬದಲಾಯಿಸಿಕೊಂಡಿದ್ದಳು. ಭಾರತದಲ್ಲಿರುವ ಸಂತೋಷ್ ಪೂಜಾರಿ ಎಂಬುವವರ ಎಲ್ಲ ಪಾಸ್‌ಪೋರ್ಟ್‌ಗಳನ್ನು ಪರಿಶೀಲನೆ ನಡೆಸಿದ್ದರು. ಯಾವುದೇ ಪಾಸ್‌ಪೋರ್ಟ್ ಫೋಟೋ ವಿಳಾಸ ತಾಳೆ ಆಗಿರಲಿಲ್ಲ ಶ್ರೀದೇವಿ ಪಾಸ್‌ಪೋರ್ಟಿಗಾಗಿ ನೀಡಿದ್ದ ವಿಳಾಸವೂ ಖೊಟ್ಟಿ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಆ ಬಳಿಕವೇ ಕದ್ರಿ ಇನ್‌ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದರು.
ಇದಕ್ಕೂ ಮುನ್ನ ಪದ್ಮಾಳನ್ನು 2005ರ ಅಕ್ಟೋಬರ್‌ನಲ್ಲಿ ಮುಂಬೈ ಪೊಲೀಸರು ಬಂಧಿಸಿ, ನಕಲಿ ಪಾಸ್‌ಪೋರ್ಟ್ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಠಾಣೆಗೆ ನಿಯಮಿತವಾಗಿ ಹಾಜರಾಗಬೇಕು ಎಂಬ ಷರತ್ತಲ್ಲಿ ಜಾಮೀನು ನೀಡಲಾಗಿತ್ತು. ಆದರೆ ಒಂದೇ ತಿಂಗಳಲ್ಲಿ ಮಂಗಳೂರಿನಿಂದ ನಕಲಿ ಪಾಸ್‌ಪೋರ್ಟ್ ಮಾಡಿಸಿ ವಿದೇಶಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ 2006ರಲ್ಲಿ ಪದ್ಮ ಹೆಸರಲ್ಲಿ ಮುಂಬೈ ಪೊಲೀಸರಿಂದಲೂ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.
ಕರಾವಳಿಯಲ್ಲಿ ರವಿ ಪೂಜಾರಿ ಹಫ್ತಾ ವಸೂಲಿ ದಂಧೆ ಮಿತಿ ಮೀರಿದಾಗ ಆತನನ್ನು ಸದೆಬಡಿಯಲು ಕದ್ರಿ ಇನ್‌ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಆತನ ಹಿಂದೆ ಬಿದ್ದಿದ್ದರು. ನಂತರ ಆತನ ಪತ್ನಿ ಪದ್ಮಾ ಶ್ರೀದೇವಿ, ಮಗ ಆರ್ಯನ್ ಹೆಸರಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿ, ಲುಕ್‌ಔಟ್ ಸರ್ಕುಲ್ಯರ್ ಹೊರಡಿಸುವಲ್ಲಿ ಯಶಸ್ವಿಯಾಗಿದ್ದರು.
ಮಂಗಳೂರು ಎಸಿಪಿ ಮುಂಬೈಗೆ: ಸೋಮವಾರ ರಾತ್ರಿ 8.30ಕ್ಕೆ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬಂದಿಳಿದ ಪದ್ಮಾ, ಆರ್ಯನ್, ಅಲ್ಲಿಂದ ಬೆಂಗಳೂರಿಗೆ ಹೊರಡುವವರಿದ್ದರು. ಗುರುತು ಪತ್ತೆಹಚ್ಚಲು ಆಗದಂತೆ ಚಹರೆ ಬದಲಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಇದ್ದ ವಿಮಾನ ನಿಲ್ಧಾಣ ಪ್ರಾಧಿಕಾರ ಅಧಿಕಾರಿಗಳು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಲ್ಲಿಂದ ಮಂಗಳೂರು ಕಮಿಷನರ್‌ಗೆ ಸುದ್ದಿ ಮುಟ್ಟಿತ್ತು. ಕದ್ರಿ ಪೊಲೀಸರು ರಾತ್ರಿಯೇ ಮುಂಬೈ ಬಸ್ ಹತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಎಸಿಪಿ ತಿಲಕ್‌ಚಂದ್ರ ವಿಮಾನ ಮೂಲಕ ಮುಂಬೈ ತಲುಪಿದ್ದು, ಶ್ರೀದೇವಿ ಸಂತೋಷ್ ಪೂಜಾರಿಯೇ ಪದ್ಮಾ ಎಂಬುದನ್ನು ಮುಂಬೈ ಪೊಲೀಸರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಆದರೆ ಮುಂಬೈ ಪೊಲೀಸರು ಬಂಧನ ದೃಢೀಕರಿಸುತ್ತಿಲ್ಲ. ದಾವೂದ್ ಇಬ್ರಾಹಿಂ ಕುರಿತು ರವಿ ಪೂಜಾರಿ ರಹಸ್ಯ ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾ ಸ್ವಲ್ಪ ಮೃದು ಧೋರಣೆ ಹೊಂದಿದೆ ಎನ್ನುವ ಮಾಹಿತಿಯೂ ಇದೆ. ಪತ್ನಿ, ಮಗ ಬಂಧನ ಆದರೆ ಆತ ಮಾಹಿತಿ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದೂ ಕೂಡ ಬಂಧನ ದೃಢೀಕರಣ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.
ಸಹಚರರು ನ್ಯಾಯಾಲಯಕ್ಕೆ
ಮೈಸೂರು: ಹತ್ಯೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಭೂಗತ ಪಾತಕಿ ರವಿ ಪೂಜಾರಿಯ ಸಹಚರರನ್ನು ಮಂಗಳವಾರ ಮೈಸೂರಿನ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಹಾಜರುಪಡಿಸಲಾಗಿತ್ತು. ಮಂಗಳೂರಿನ ಬಿಲ್ಡರ್ ಜಾನ್ ಪ್ಯಾಟ್ರಿಕ್ ಎಂಬವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಈ ಆರೋಪದ ಮೇಲೆ ಬಂಧಿಸಲಾಗಿದ್ದ ಒಂಬತ್ತು ಮಂದಿ ಆರೋಪಿಗಳ ಪೈಕಿ ಏಳು ಮಂದಿಯನ್ನು 3ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ಮಲ್ಪೆಯ ಕುಡಿ!
ಉಡುಪಿ ಮಲ್ಪೆ ಕಲ್ಮಾಡಿಯ ಸೂರ್ಯ ಪೂಜಾರಿ ಮಗ ರವಿ ಪೂಜಾರಿ. ಅರ್ಧದಲ್ಲಿಯೇ ಶಾಲೆ ಬಿಟ್ಟು ಮುಂಬೈಗೆ ದುಡಿಮೆಗೆ ಹೋಗಿ ಡ್ಯಾನ್ಸ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದೇ ಆತನ ಪಾತಕ ಪ್ರಪಂಚಕ್ಕೆ ರಹದಾರಿ ಆಯಿತು. ಚೋಟಾರಾಜನ್, ಗುರುಸಾಟಂ ಜತೆ ನಿಕಟ ಸಂಪರ್ಕ ಬಂದ ಬಳಿಕ ಬಾಳಾ ಜಾಲ್ತೆಯ ಕೊಲೆ ಮಾಡಿದ. ಆ ಬಳಿಕ ಹಿಂದಿರುಗಿ ನೋಡಿಲ್ಲ.
1996ರಲ್ಲಿ ಚೋಟಾ ರಾಜನ್, ಗುರು ಸಾಟಂ ಜತೆ ವಿದೇಶಕ್ಕೆ ತೆರಳಿದ. ತಾನು ಸ್ವತಂತ್ರ್ಯ ಡಾನ್ ಎಂದು ಹೇಳುತ್ತಿರುವ ರವಿ ಪೂಜಾರಿ, ಆಗಾಗ, ಮುಂಬೈ ಮಾಧ್ಯಮಕ್ಕೆ ಮತ್ತು ಮಂಗಳೂರಿನ ಮಾಧ್ಯಮ ಕೇಂದ್ರಗಳಿಗೆ ಕರೆ ಮಾಡಿ ಕೊಲೆ, ಕೊಲೆ ಬೆದರಿಕೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾನೆ.
-ಜಿತೇಂದ್ರ ಕುಂದೇಶ್ವರ
Advertisement