ಯಾರು ಮುಂದಿನ ರಾಷ್ಟ್ರಕವಿ?

ಹಿರಿಯ ಸಾಹಿತಿ ಜಿ.ಎಸ್ ಶಿವರುದ್ರಪ್ಪ ಅವರ ನಿಧನದಿಂದ ತೆರವಾಗಿರುವ 'ರಾಷ್ಟ್ರಕವಿ' ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ...
ಚನ್ನವೀರ ಕಣವಿ & ಡಾ ಕೆಎಸ್ ನಿಸಾರ್ ಅಹಮದ್
ಚನ್ನವೀರ ಕಣವಿ & ಡಾ ಕೆಎಸ್ ನಿಸಾರ್ ಅಹಮದ್

ಬೆಂಗಳೂರು: ಹಿರಿಯ ಸಾಹಿತಿ ಜಿ.ಎಸ್ ಶಿವರುದ್ರಪ್ಪ ಅವರ ನಿಧನದಿಂದ ತೆರವಾಗಿರುವ 'ರಾಷ್ಟ್ರಕವಿ' ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಸಾಹಿತಿ ಕೋ. ಚೆನ್ನಬಸಪ್ಪ ನೇತೃತ್ವದಲ್ಲಿ ಸರ್ಕಾರದಿಂದ ನೇಮಕವಾಗಿರುವ  9 ಸದಸ್ಯರ ಸಮಿತಿ, ನಗರದ ಕನ್ನಡ ಭವನದಲ್ಲಿ ಬುಧವಾರ ಸಭೆ ಸೇರಿ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿತು.

ರಾಷ್ಟ್ರಕವಿ ಆಯ್ಕೆಗೆ ಸರ್ಕಾರ ವಿಧಿಸಿರುವ  ಮಾರ್ಗಸೂಚಿ, ಸಮಿತಿ ಪಾಲಿಸಬೇಕಾದ ಮಾನದಂಡ, ಅನುಸರಿಸಬೇಕಾದ ನಿಯಮ ಬಗ್ಗೆ  ಸಭೆಯಲ್ಲಿ ಸುರ್ದೀರ್ಘ ಚರ್ಚೆ ನಡೆಯಿತು. ಸಮಿತಿಯ ಮೊದಲ ಸಭೆ ಇದಾಗ್ಗಿದ್ದರಿಂದ, ರಾಷ್ಟ್ರಕವಿ ಆಯ್ಕೆಗೆ ಪ್ರಸ್ತಾಪವಾಗಿರುವ ಯಾವುದೇ  ಹೆಸರುಗಳು ಸಭೆಯಲ್ಲಿ ಪ್ರಸ್ತಾಪಕ್ಕೆ ಬಂದಿಲ್ಲ. ಬದಲಿಗೆ ಮಾನದಂಡಗಳ ವಿಚಾರವೇ ಸಭೆಯ ಪ್ರಮುಖ ಅಂಶವಾಗಿತ್ತು ಎನ್ನಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ. ಎ ದಯಾನಂದ ಸಭೆಯ ನಂತರ ಮಾತನಾಡಿ, ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮಿತಿಗೆ ತನ್ನ ಮಾರ್ಗ ಸೂಚಿ ನೀಡಿದೆ. ಅದರಂತೆ ಸಮಿತಿ ಪಾಲಿಸಬೇಕಾದ ಮಾನದಂಡಗಳ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚೆ ನಡೆದಿದೆ. ಉಳಿದಂತೆ ಯಾವುದೇ ವಿಚಾರಗಳು ಪ್ರಸ್ತಾಪಕ್ಕೆ ಬಂದಿಲ್ಲ ಎಂದು ತಿಳಿಸಿದರು.

ನಾಡಿನ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಹಿರಿಯರನ್ನು ಅವರ ಸಾಹಿತ್ಯ ಸೇವೆ ಕನ್ನಡದ ಬಗೆಗಿನ ಅವರ ಕಾಳಜಿ ಜಾತ್ಯಾತೀತ ನಿಲುವು, ಸಮಾಜದಲ್ಲಿ ಅವರು ಗಳಿಸಿರುವ ಸ್ಥಾನ ಮಾನ ಹಾಗೂ ಸಾಮಾಜಿಕ ನ್ಯಾಯದ ಮಾನದಂಡಗಳ ಮೇಲೆ ಆಯ್ಕೆ ಮಾಡಬೇಕೆಂದು ಸರ್ಕಾರ ಹೇಳಿದೆ. ಇದಕ್ಕೆ ಪೂರಕವಾಗಿ ಸಮಿತಿ ತನ್ನ ಮೊದಲ ಸಭೆಯಲ್ಲಿ ಚರ್ಚೆ ನಡೆಸಿದೆ. ಜ.7 ರಂದು ಮತ್ತೆ ಸಭೆ ಸೇರಲಿದೆ. ಅಲ್ಲಿಯೂ ಚರ್ಚೆ ನಡೆಸಿ, ಸಮಿತಿ ತನ್ನ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಲಿದೆ ಎಂದು ಸಮಿತಿ ಸದಸ್ಯರಲ್ಲೊಬ್ಬರಾದ ಕನ್ನಡ ಪುಸ್ತಕ  ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು. ರಾಷ್ಟ್ರಕವಿ ಆಯ್ಕೆಗಾಗಿ ಇದೇ ಮೊದಲ ಬಾರಿಗೆ ಸರ್ಕಾರ ಸಮಿತಿ ರಚಿಸಿದೆ. ಅಲ್ಲದೇ, ಸಮಿತಿ ಮುಂದೆ ಆಯ್ಕೆಗೆ ಮಾನದಂಡಗಳನ್ನು ವಿಧಿಸಲಾಗಿದೆ. ಆದರೆ,  ರಾಷ್ಟ್ರಕವಿಗಳಾದ ಕುವೆಂಪು, ಗೋವಿಂದ ಪೈ ಹಾಗೂ ಜಿ ಎಸ್ ಶಿವರುದ್ರಪ್ಪ ಅವರನ್ನು ಸರ್ಕಾರಗಳು ಯಾವುದೇ ಸಮಿತಿ ನೇಮಿಸದೆ, ಸಾಹಿತ್ಯ ವಲಯದ ಅಭಿಪ್ರಾಯಗಳನ್ನು ಪಡೆಗು ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಮಿತಿಯಲ್ಲಿರುವ ಸದಸ್ಯರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ, ಸಮಿತಿ ಅಧ್ಯಕ್ಷ ಕೋ. ಚನ್ನಬಸಪ್ಪ, ಸದಸ್ಯರಾದ ಎಸ್.ಜಿ ಸಿದ್ಧರಾಮಯ್ಯ, ಗಿರಡ್ಡಿ ಗೋವಿಂದರಾಜ್, ಕೆ. ಷರೀಫಾ, ರೂಪಾ ಹಾಸನ, ಎಚ್.ಎಲ್ ಪುಷ್ಪಾ, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಡಾ. ಬಂಜಗೆರೆ ಜಯ ಪ್ರಕಾಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣ ಶೆಟ್ಟಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ.

ನಿಸಾರ್ ಅಥವಾ ಕಣವಿ
ಜೆಎಸ್‌ಎಸ್ ನಿಧನದ ದಿನಗಳಿಂದಲೇ ರಾಷ್ಟ್ರಕವಿ ಆಯ್ಕೆ ಸಾಕಷ್ಟು ಸುದ್ದಿ ಮಾಡುತ್ತ ಬಂದಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಮುಂದಿನ ರಾಷ್ಟ್ರಕವಿ ಯಾರು ಎಂಬ ಸಾರ್ವಜನಿಕ ಪ್ರಶ್ನೆಗಳ ನಡುವೆಯೇ, ತೆರೆಮರೆಯಲ್ಲಿ ಮೂರ್ನಾಲ್ಕು ಹೆಸರುಗಳುಕೇಳಿ ಬಂದಿವೆ. ಅದಕ್ಕಾಗಿ ಕೆಲವರು ಲಾಬಿಯನ್ನೂ ಆರಂಭಿಸಿದ್ದಾರೆ. ಡಾ ಕೆಎಸ್ ನಿಸಾರ್ ಅಹಮದ್  ಹಾಗೂ ಚನ್ನವೀರ ಕಣವಿ ಅವರು ಹೆಸರು ಆಯ್ಕೆ ಸಮಿತಿ ಮುಂದಿವೆ ಎನ್ನಲಾಗಿದೆ. ಈ ಮಧ್ಯೆ ಸರ್ಕಾರದ ಮಟ್ಟದಲ್ಲಿ ಈಗ ಚಂದ್ರಶೇಖರ ಕಂಬಾರ ಅವರ ಹೆಸರು ಕೂಡಾ ಚಾಲ್ತಿ ಪಡೆದುಕೊಂಡಿದೆ ಎನ್ನುವ ಸುದ್ದಿಗಳಿವೆ. ಆದರೆ, ಸರ್ಕಾರ ಅಥವಾ ಆಯ್ಕೆ ಸಮಿತಿ ಮಟ್ಟದಲ್ಲಿ ಯಾವುದೇ ಹೆಸರು ಇನ್ನು ಅಂತಿಮವಾಗಿಲ್ಲ.

ಸಾಹಿತ್ಯ ವಲಯದಲ್ಲೂ ಸ್ಪರ್ಧೆಯೆ?
ರಾಷ್ಟ್ರಕವಿ ಆಯ್ಕೆಗೆ ಇದೇ ಮೊದಲ ಬಾರಿಗೆ ಸರ್ಕಾರ ಸಮಿತಿ ನೇಮಿಸಿದೆ. ಇದು ಕೂಡಾ  ಕುತೂಹಲ ಕೆರಳಿಸಿದೆ . ಕಾರಣ,  ಈ ಹಿಂದೆ ಯಾವುದೇ ಮಾನದಂಡಗಳನ್ನು ಪಾಲಿಸದೆ, ಸರ್ಕಾರಗಳು, ಸಾಹಿತಿಗಳ ಅಭಿಪ್ರಾಯಗಳ ಮೇಲೆಯೇ ಅರ್ಹರಾದವರನ್ನೇ ರಾಷ್ಟ್ರಕವಿಗಳನ್ನಾಗಿ ಘೋಷಣೆ ಮಾಡಿದ್ದವು. ಇಷ್ಟಾಗಿಯೂ ಸರ್ಕಾರ ಈಗೇಕೆ ಸಮಿತಿ ನೇಮಿಸಿದೆ ಎನ್ನುವ ಮೂಲಕವೇ ರಾಷ್ಟ್ರಕವಿ ಆಯ್ಕೆಗೆ ಸಾಹಿತ್ಯ ವಲಯದಲ್ಲಿ ಸ್ಪರ್ಧೆ ಇದೆಯೇ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.  ಹೀಗಂತ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಸ್ಪರ್ಧೆ ಇರುವ ಕಾರಣಕ್ಕೋ ಅಥವಾ ಸೂಕ್ತರಾದವರನ್ನು ನೇಮಿಸಲಿ ಎನ್ನುವ ಕಾರಣಕ್ಕೋ ಸರ್ಕಾರ ನೇಮಿಸಿರುವ ಸಮಿತಿ, ತಾನು  ಹೇಳುತ್ತಿರುವ ಮಾನದಂಡಗಳ ಆಧಾರದಲ್ಲಿ ಯಾರನ್ನು ಆಯ್ಕೆ ಮಾಡಲಿದೆ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ.

ಕಾಲ ಮಿತಿ ಇಲ್ಲ
ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಯಾವುದೇ ಕಾಲಮಿತಿ ಹಾಕಿಲ್ಲ. ಹಾಗೆಯೇ ರಾಷ್ಟ್ರಕವಿಗಳನ್ನು ಆಯ್ಕೆ  ಮಾಡುವುದು ಕಡ್ಡಾಯ ಅಂತಲೂ ಸಮಿತಿಗೆ ಹೇಳಿಲ್ಲ. ಸೂಕ್ತರೆನಿಸಿದವರು ಸಿಗಲಿಲ್ಲವೆಂದರೆ, ಆಯ್ಕೆಯನ್ನು ಸರ್ಕಾರಕ್ಕೆ ಬಿಡಬಹುದು. ಅಂತಹ ಅಧಿಕಾರ ಸಮಿತಿಗೆ ಇದೆ. ಈ ನಿಟ್ಟಿನಲ್ಲಿಯೇ ಆಯ್ಕೆಗೆ ಸೂಕ್ತ ಮಾನದಂಡಗಳನ್ನು ಹಾಕಿಕೊಂಡೇ, ಬುಧವಾರ ತನ್ನ ಮೊದಲ ಸಭೆಯಲ್ಲಿ ಚರ್ಚೆ ನಡೆದಿದೆ.

- ಡಾ. ಬಂಜಗೆರೆ ಜಯಪ್ರಕಾಶ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com