'ಕೋತಿ'ಯಾಟವಯ್ಯ!

ಆಂಜನೇಯ
ಆಂಜನೇಯ

ಮೈಸೂರು: ಸಚಿವ ಆಂಜನೇಯ ಅವರು ಭಾರತರತ್ನ ಸಂಬಂಧ ನೀಡಿದ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ವಿರೋಧ ಪಕ್ಷಗಳಿಂದ ಹಿಡಿದು ಸ್ವಪಕ್ಷದವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋತಿ ಎಂದು ಹೆಸರಿಡುತ್ತಿದ್ದರು
ಸಚಿವ ಆಂಜನೇಯ ಅವರ ತಂದೆ-ತಾಯಿ ಬಹುಶಃ ದೈವಭಕ್ತರಾಗಿದ್ದರು. ಆ ಕಾರಣಕ್ಕೆ ಅವರಿಗೆ ದೇವರ ಹೆಸರನ್ನು ಇಟ್ಟಿದ್ದಾರೆ. ಇಲ್ಲದಿದ್ದರೆ ಕೋತಿ ಎಂದು ಹೆಸರಿಡುತ್ತಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಗೇಲಿ ಮಾಡಿದ್ದಾರೆ. ಬಿಜೆಪಿಯವರು ಗೋಡ್ಸೆಗೂ ಭಾರತರತ್ನ ನೀಡುತ್ತಾರೆ ಎಂದು ಹೇಳಿರುವುದು ದುರದೃಷ್ಟಕರ. ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹೇಳಿದರು.

ರಾಮ ಬುದ್ಧಿ ನೀಡಲಿ: ಗೋಮ
ವಾಜಪೇಯಿ ಅವರು ಪ್ರಥಮ ಬಾರಿಗೆ ಸಂಸದರಾಗಿದ್ದಾಗಲೇ ನೆಹರು ಅವರು ಅವರಲ್ಲಿ ನಾಯಕತ್ವ ಗುಣ ಗುರುತಿಸಿ, ಮುಂದೊಂದು ದಿನ ಪ್ರಧಾನಿಯಾಗುತ್ತಾರೆ ಎಂದಿದ್ದರು. ವಾಜಪೇಯಿ ಹಾಗೂ ಮಾಳವೀಯ ಅವರ ಬಗ್ಗೆ ಗೊತ್ತಿಲ್ಲದೆ ಮಾತನಾಡಿರುವ ಆಂಜನೇಯ ಅವರಿಗೆ ಈ ರಾಮ ಬುದ್ಧಿ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಹೇಳಿದ್ದಾರೆ. ಸಚಿವರ ಬಾಯಿಂದ ಇಂಥಹ ಹೇಳಿಕೆ ಬರಬಾರದಿತ್ತು. ಇದು ಖಂಡನೀಯ ಎಂದು ಹೇಳಿದ್ದಾರೆ.

ಆಕ್ಷೇಪವಿದೆ: ಶ್ರೀನಿವಾಸಪ್ರಸಾದ್
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮದನ್ಮೋಹನ ಮಾಳವೀಯ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಬಗ್ಗೆ ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಅವರು ನೀಡಿರುವ ಹೇಳಿಕೆ ಸಮರ್ಥನೀಯವಲ್ಲ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ವಾಜಪೇಯಿ ಅವರು ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ಸಹ ಅವರನ್ನು ಅಪಾರವಾಗಿ ಗೌರವಿಸುತ್ತದೆ. ಹೀಗಾಗಿ ಸಚಿವ ಆಂಜನೇಯ ಅವರು ನೀಡಿರುವ ಹೇಳಿಕೆಯನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ ಎಂದರು. ಜ್ಯೋತಿಬಸು, ರಾಮ್ಮನೋಹರ್ ಲೋಹಿಯಾ, ಜಾರ್ಜ್ ಫರ್ನಾಂಡೀಸ್, ವಾಜಪೇಯಿ ಎಲ್.ಕೆ ಆಡ್ವಾಣಿ ಸೇರಿದಂತೆ ಅನೇಕರನ್ನು ಪಕ್ಷಾತೀತವಾಗಿ ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಸಚಿವ ಆಂಜನೇಯ ಅವರು ನೀಡಿರುವ ಹೇಳಿಕೆಯನ್ನು ಕೇಳಲು ಹಾಗೂ ಓದಲು ಬಯಸುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಹೇಳಿಕೆಗೆ ಈಗಲೂ ಬದ್ಧ: ಆಂಜನೇಯ
ಭಾರತರತ್ನ ಕುರಿತು ನೀಡಿದ್ದ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಎಲ್ಲೂ ಅಸಂಸದೀಯವಾಗಿ ಮಾತನಾಡಿಲ್ಲ. ಮುಂದೆ ಗೋಡ್ಸೆ ಅವರಿಗೂ ಭಾರತರತ್ನ ಸಿಕ್ಕರೆ ಅಚ್ಚರಿ ಪಡೆಬೇಕಿಲ್ಲ ಎಂದಿದ್ದೇನೆ. ಹಾಗಂತ ಮಾಜಿ ಪ್ರಧಾನಿ ವಾಜಪೇಯಿ ಮತ್ತು ಮಾಳವೀಯ ಅವರನ್ನು ಟೀಕಿಸಿಲ್ಲ ಎಂದು ಸಚಿವ ಆಂಜನೇಯ ಸ್ಪಷ್ಟ ಪಡಿಸಿದರು. ವಾಜಪೇಯಿ ಮತ್ತು ಮಾಳವೀಯ ಅವರ ಬಗ್ಗೆ ಗೌರವವಿದೆ. ಆದರೆ, ಗೋಡ್ಸೆ ಕೂಡ ಬಿಜೆಪಿಯವರಿಗೆ ಮುಖ್ಯವಾಗಿರುವುದರಿಂದ ಅವರಿಗೂ ಭಾರತ ರತ್ನ ಸಿಗಬಹುದು ಎಂದಿದ್ದರಲ್ಲಿ ತಪ್ಪೇನಿದೆ ಎಂಬುದನ್ನು ಅವರೇ ಹೇಳಲಿ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದರು. ದಡ್ಡ, ಅಜ್ಞಾನಿ ಎಂದು ವ್ಯಕ್ತಿಗತನಿಂದನೆ ಮಾಡುವವರು ತಾವೆಷ್ಟು ಬುದ್ಧಿವಂತರು ಎಂಬುದನ್ನು ನೋಡಿಕೊಳ್ಳಲಿ. ಕೋತಿ ಎಂದು ಟೀಕಿಸುವವರಿಗೆ ಪೂರ್ವಜರ ಇತಿಹಾಸಗೊತ್ತಿಲ್ಲ. ಎಲ್ಲರೂ ಕೋತಿಯ ವಂಶಸ್ಥರೇ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಸಚಿವರು ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com