ನಿಂದನೆಯಿಂದ ನೊಂದ ಮಹಿಳೆ ನೇಣಿಗೆ ಶರಣು

ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರು ನಡತೆ ಬಗ್ಗೆ ನಿಂದಿಸಿ, ಹಲ್ಲೆ ಮಾಡಿದ್ದರಿಂದ...
ನಿಂದನೆಯಿಂದ ನೊಂದ ಮಹಿಳೆ ನೇಣಿಗೆ ಶರಣು

ಬೆಂಗಳೂರು: ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರು ನಡತೆ ಬಗ್ಗೆ ನಿಂದಿಸಿ, ಹಲ್ಲೆ ಮಾಡಿದ್ದರಿಂದ ನೊಂದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಚಂದ್ರಾಲೈಔಟ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ನಾಯಂಡಹಳ್ಳಿ ನಿವಾಸಿ ದೇವಿ(24) ಆತ್ಮಹತ್ಯೆ ಮಾಡಿಕೊಂಡವರು. ಹಲ್ಲೆ ಮಾಡಿದ ಮನೆ ಮಾಲೀಕರ ಮಕ್ಕಳಾದ ರಾಜೇಶ್ವರಿ ಹಾಗೂ ಮೀನಾಕ್ಷಿ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇನ್ನೂ ಕೆಲ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ಘಟನೆಯ ವಿವರ: ಕುಮಾರ್ ಹಾಗೂ ದೇವಿ ದಂಪತಿಗೆ 2 ವರ್ಷದ ವಿಶ್ವಾಸ್ ಎಂಬ ಪುತ್ರನಿದ್ದು, ಕಳೆದ ಆರು ತಿಂಗಳ ಹಿಂದೆ ಸುಬ್ರಮಣಿ ಅವರ ಮನೆಯಲ್ಲಿ ವಾಸಿಸುತ್ತಿದ್ದರು.

ಕುಮಾರ್ ಮೂಗನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದೇವಿಯ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಾಯಿ ಸಹ ಮಗಳ ಜತೆಯಲ್ಲಿ ವಾಸಿಸುತ್ತಿದ್ದರು. ದೇವಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ದೇವಿ ಆ ಮನೆಗೆ ಬಂದಾಗಿನಿಂದ ಅವರ ನಡತೆ ಬಗ್ಗೆ ಅನುಮಾನಿಸಿದ ಮನೆ ಮಾಲೀಕರ ಮಕ್ಕಳು ಹಾಗೂ ಅಕ್ಕಪಕ್ಕದ ಮನೆಯವರು ಆಕೆಯ ಜತೆ ಆಗಾಗ ಜಗಳ ಮಾಡುತ್ತಿದ್ದರು.

ಮನೆ ಮಾಲೀಕರ ಪುತ್ರ ಮಣಿಕಂಠ ಹಾಗೂ ದೇವಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಹಾಗೂ ಮನೆ ಖಾಲಿ ಮಾಡದಿದ್ದಲ್ಲಿ ಸುತ್ತಮುತ್ತಲ ಮನೆಯವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಗುರುವಾರ ಅಕ್ಕಪಕ್ಕದ ಮನೆಯ ಮಹಿಳೆಯರು ಹಾಗೂ ಮನೆ ಮಾಲೀಕರ ಇಬ್ಬರು ಪುತ್ರಿಯರು ದೇವಿಯ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದಾರೆ.

ಘಟನೆ ನಡೆದ ಕೆಲಹೊತ್ತಿನ ನಂತರ ಮನೆಗೆ ಬಂದ ದೇವಿ ಅವರ ತಾಯಿ, ಮಗಳನ್ನು ಸಮಾಧಾನ ಪಡಿಸಿದ್ದು, ಮನೆ ಕಾಲಿ ಮಾಡೋಣ ಎಂದು ತಿಳಿಸಿದ್ದಾರೆ. ನಂತರ ಮಗುವಿಗೆ ಹಾಲು ತರಲು ಅಂಗಡಿಗೆ ಹೋಗಿದ್ದಾರೆ. ಆಕೆ ಹಿಂತಿರುಗುವ ವೇಳೆಗೆ 'ನನಗೂ ಮನೆಮಾಲೀಕರ ಮಗನಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸ್ಥಳೀಯರು ನನ್ನನ್ನು ನಿಂಧಿಸಿದ್ದಾರೆ. ಇದರಿಂದ ಬೇಸತ್ತ ನಾನು ಆತ್ಮಹತ್ಯೆಗೆ ಶರಣಾಗಿದ್ದೇನೆ' ಎಂದು ಡೆತ್ ನೋಟ್ ಬರೆದಿಟ್ಟು ದೇವಿ ನೇಣಿಗೆ ಶರಣಾಗಿದ್ದಾರೆ.

ಮಣಿಕಂಠ ಪರಾರಿ:
ಘಟನೆಯ ನಂತರ ಮನೆ ಮಾಲೀಕರ ಮಗ ಮಣಿಕಂಠ ನಾಪತ್ತೆಯಾಗಿದ್ದಾನೆ. ನಡತೆ ನಿಂದಿಸಿದವರ ವಿವರ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಸದ್ಯ ಇಬ್ಬರನ್ನು ಬಂದಿಸಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಭಾರತೀಯ ದಂಡ ಸಂಹಿತೆ ಕಲಂ 306ರಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com