ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪಾಲಿಕೆ ನೌಕರರ ಧರಣಿ

ಪತ್ತೆ ಹಚ್ಚಲು ಅಧಿಕಾರಿಗಳಿಗೆ ಗುಪ್ತ ಕ್ಯಾಮೆರಾಗಳನ್ನು ನೀಡಬೇಕು ಎಂದರು...
ಪಾಲಿಕೆ ನೌಕರರ ಧರಣಿ
ಪಾಲಿಕೆ ನೌಕರರ ಧರಣಿ

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಗೋವಿಂದರಾಜು ಹಲ್ಲೆ ಪ್ರಕರಣ ಖಂಡಿಸಿ ಬಿಬಿಎಂಪಿ ನೌಕರರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು. ಎಲ್ಲ ವಲಯ ಹಾಗೂ ವಾರ್ಡ್ ಕಚೇರಿಗಳನ್ನು ಬಂದ್ ಮಾಡಿದ ಬಿಬಿಎಂಪಿಯ 1000ಕ್ಕೂ ಹೆಚ್ಚು ಅಧಿಕಾರಿಗಳು ಸಿಬ್ಬಂದಿ ಕೇಂದ್ರ ಕಚೇರಿಯಲ್ಲಿ ಸಮಾವೇಶಗೊಂಡರು. 4 ತಾಸಿಗೂ ಹೆಚ್ಚು ಕಾಲ ಪ್ರತಿಭಟಿಸಿದರು.

ಭಾಸ್ಕರ್ ಎಂಬ ವ್ಯಕ್ತಿ ಪತ್ರಕರ್ತರ ಹೆಸರಿನಲ್ಲಿ ಅಧಿಕಾರಿಗಳಿಗೆ ಹಿಂಸೆ ನೀಡಿ, ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಶಾಂತಕುಮಾರಿ, ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನ 3 ಗಂಟೆ ನಂತರವಷ್ಟೇ ಬಿಬಿಎಂಪಿ ಕಚೇರಿಗೆ ಬರುವಂತಾಗಬೇಕು.

ಇದನ್ನು ಸರಿಯಾಗಿ ಜಾರಿಗೊಳಿಸಿದರೆ ಹಲ್ಲೆ ಪ್ರಕರಣಗಳು ಕಡಿಮೆಯಾಗುತ್ತವೆ. ಈ ನಿಟ್ಟಿನಲ್ಲಿ ಆಯುಕ್ತರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದರು. ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್ ಮಾತನಾಡಿ, ಭಾಸ್ಕರ್ ಅನೇಕ ರೀತಿಯ ಅಕ್ರಮಗಳನ್ನು ನಡೆಸಲು ಅಧಿಕಾರಿಗಳಿಗೆ ಹಿಂಸೆ ನೀಡಿದ್ದಾರೆ.

ಇಂಥವರು ಅನೇಕ ಮಂದಿ ಇದ್ದು, ಪತ್ತೆ ಹಚ್ಚಲು ಅಧಿಕಾರಿಗಳಿಗೆ ಗುಪ್ತ ಕ್ಯಾಮೆರಾಗಳನ್ನು ನೀಡಬೇಕು ಎಂದರು. ಪ್ರತಿಪಕ್ಷ ನಾಯಕ ಮಂಜುನಾಥ ರೆಡ್ಡಿ ಮಾತನಾಡಿ, ಭಾಸ್ಕರ್ ಪತ್ರಕರ್ತ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಇದೇ ವ್ಯಕ್ತಿ ಈ ಹಿಂದೆ ಉಪಮೇಯರ್ ಮೇಲೂ ಹಲ್ಲೆಗೆ ಮುಂದಾಗಿದ್ದು, ಇವರ ವಿರುದ್ಧ ಕೇಸು ದಾಖಲಿಸಬೇಕು ಎಂದರು. ಆಯುಕ್ತ ಲಕ್ಷ್ಮೀನಾರಾಯಣ್ ಮಾತನಾಡಿ, ಮಧ್ಯವರ್ತಿ ಭಾಸ್ಕರ್ ಪತ್ರಕರ್ತರ ಹೆಸರಿನಲ್ಲಿ ಪಾಲಿಕೆ ಪ್ರವೇಶಿಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಹೆಚ್ಚಾಗಿದೆ.

ಇದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳುತ್ತಿದ್ದೇವೆ. ಈಗಾಗಲೇ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com