ಆರು ತಿಂಗಳಲ್ಲಿ ಪ್ರಾಧ್ಯಾಪಕರ ಹುದ್ದೆ ಭರ್ತಿ: ದೇಶಪಾಂಡೆ
ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಖಾಲಿಯಿರುವ 2,200 ಪ್ರಾಧ್ಯಾಪಕರ ಹುದ್ದೆಗಳನ್ನು ಮುಂಬರುವ ಆರು ತಿಂಗಳಲ್ಲಿ ತುಂಬಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಖಾಲಿಯಿರುವ ಹುದ್ದೆಗಳನ್ನು ಸಿಇಟಿ ಮೂಲಕ ತುಂಬಲಾಗುವುದು. 1,298 ಮಂದಿಯನ್ನು ಸಿಇಟಿ ಮೂಲಕ ನೇಮಕ ಮಾಡಲು ಅನುಮತಿ ಸಿಕ್ಕಿದೆ. ಉಳಿದ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು ಎಂದರು.
ರಾಜ್ಯದಲ್ಲಿ 70ಲಕ್ಷ ಯುವಜನರಿದ್ದು, ಅರಲ್ಲಿ 17 ಲಕ್ಷ ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ. ರಾಜೀವ್‌ಗಾಂಧಿ ಶಿಕ್ಷಣ ಯೋಜನೆಯಡಿ ಪದವಿ ಮತ್ತು ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡುವ ಉದ್ದೇಶದಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ಜ.6ರಿಂದ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಕ್ಲಸ್ಟರ್ ವಿವಿ ಮಾನ್ಯತೆ: ರಾಷ್ಟ್ರೀಯ ಉಚ್ಚತಾ ಶಿಕ್ಷಣ ಅಭಿಯಾನ ಯೋಜನೆ(ರೂಸಾ) ಅನ್ವಯ ಮಹಾರಾಣಿ ಮಹಿಳಾ ಕಲಾ, ವಿಜ್ಞಾನ ಕಾಲೇಜು ಮತ್ತು ಮಹಿಳಾ ಗೃಹ ವಿಜ್ಞಾನ ಕಾಲೇಜುಗಳಿಗೆ ಕ್ಲಸ್ಟರ್ ವಿಶ್ವವಿದ್ಯಾಲಯದ ಮಾನ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜನವರಿ 20ರೊಳಗೆ ಉನ್ನತ ಮಟ್ಟದ ಸಮಿತಿ ರಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ.
ಕೇಂದ್ರ ಸರ್ಕಾರ ಕ್ಲಸ್ಟರ್ ವಿವಿಗೆ ಮಾನ್ಯತೆ ನೀಡಿದರೆ ಮೂರು ಕಾಲೇಜುಗಳ ಮೂಲಸೌಲಭ್ಯಕ್ಕೆ ರೂಸಾ ಯೋಜನೆ ಅನ್ವಯ ವಾರ್ಷಿಕ ರೂ.55 ಕೋಟಿ ಅನುದಾನ ದೊರೆಯಲಿದೆ ಎಂದರು.
ಅರ್ಜಿ ಸಲ್ಲಿಕೆಗೆ ಡಿ.31 ಇಂತಿಮ ದಿನ: ನ್ಯಾಕ್ ಮಾನ್ಯತೆ ಪಡೆದಿರುವ ಕಾಲೇಜುಗಳು ಮುಂದಿನ ಶೈಕ್ಷಣಿಕ ಸಾಲಿನಿಂದ ಯಾವುದೇ ಹೊಸ ಕೋರ್ಸ್ ಪ್ರಾರಂಭಿಸುವುದಿದ್ದರೆ ಡಿ.31ರೊಳಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ವರ್ಷ 84 ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ಸಿಕ್ಕಿದೆ ಎಂದು ತಿಳಿಸಿದರು.
ನಾನಾ ಕ್ಷೇತ್ರಗಳಲ್ಲಿ ಸಾಧಾನೆ ಮಾಡಿದ ಹಳೆ ವಿದ್ಯಾರ್ಥಿಗಳಾದ ನಟಿ ಯಮುನಾ ಮೂರ್ತಿ, ನೃತ್ಯಪಟು ಲಲಿತಾ ಶ್ರೀನಿವಾಸನ್, ಡಾ.ಗೀತಾಬಲಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್, ಕಾಲೇಜು ನಿರ್ದೇಶಕ ಕೋದಂಡರಾಮಯ್ಯ, ಭಾಗ್ಯಲಕ್ಷ್ಮಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ