ಬೆಂಗಳೂರು: ಹುಟ್ಟಿನಿಂದಲೇ ಹೃದ್ರೋಗ (ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ – ವಿಎಸ್‌ಡಿ) ಕಾಯಿಲೆಯಿಂದ ಬಳಲುತ್ತಿದ ಪಾಕಿಸ್ತಾನದ ಕರಾಚಿಯ ಮೊಹಮ್ಮದ್ ಹಮ್ದಾನ್ಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಅಲ್ಲದೆ ಆತನ ಜನ್ಮದಿನಾಚರಣೆಯನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡ.
ವಿಎಸ್‌ಡಿ ಕಾಯಿಲೆಯಿಂದ ಬಳಲುತ್ತಿದ್ದ ಮೊಹಮ್ಮದ್ ಮೇಲಿಂದ ಮೇಲೆ ಅಸ್ವಸ್ತನಾಗುತ್ತಿದ್ದ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ನಗರಗಳ ಮಕ್ಕಳ ಹೃದ್ರೋಗ ತಜ್ಞ ವೈದ್ಯರು ಮಗುವಿಗೆ ತಕ್ಷಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದರು.
‘ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿದ್ದು ಅದಕ್ಕೆ ಬೇಕಾದ ತಾಂತ್ರಿಕ ನೈಪುಣ್ಯ ಅಲ್ಲಿ ಲಭ್ಯವಿಲ್ಲ. ಬೇರೆಡೆ ಆದಷ್ಟು ಬೇಗ ಚಿಕಿತ್ಸೆ ಕೊಡಿಸಬೇಕು ಎಂದು ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಮಗುವಿನ ಪೋಷಕರು ಇಂಟರ್‌ನೆಟ್ ಮೂಲಕ ಆಸ್ಪತ್ರೆಗಾಗಿ ಹುಡುಕಾಟ ನಡೆಸಿದರು. ಆಗ ಜಯದೇವ ಆಸ್ಪತ್ರೆ ಕುರಿತು ಮಾಹಿತಿ ಪಡೆದ ಅವರು, ಇಲ್ಲಿಯೇ ಚಿಕಿತ್ಸೆ ಕೊಡಿಸಲು ನಿರ್ಧರಿಸಿದರು’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
‘ಒಂದು ತಿಂಗಳ ಹಿಂದೆಯಷ್ಟೇ ಈ ಮಗುವಿನ ಪೋಷಕರು ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಇ-–ಮೇಲ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದರು. ಅವುಗಳನ್ನು ವಿವರವಾಗಿ ಪರಿಶೀಲಿಸಿದ ನಂತರ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು’ ಎಂದು ಹೇಳಿದರು. ಡಾ. ಪಿ.ಎಸ್. ಸೀತಾರಾಮ ಭಟ್, ಡಾ. ಗಿರೀಶ್ ಗೌಡ, ಡಾ. ಪರಿಮಳ ಪ್ರಸನ್ನ ಸಿಂಹ ಮತ್ತು ಡಾ. ಜಯರಂಗನಾಥ್ ಅವರ ತಂಡ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು.
ಈಗ ಮಗುವು ಸಂಪೂರ್ಣ ಗುಣ ಹೊಂದಿದ್ದು, ಅದರ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಿಹಿ ಹಂಚುವ ಮೂಲಕ ಆಸ್ಪತ್ರೆಯಲ್ಲಿಯೇ ಆಚರಿಸಲಾಯಿತು. ಇನ್ನೆರಡು ದಿನಗಳಲ್ಲಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಡಾ. ಮಂಜುನಾಥ್ ವಿವರಿಸಿದರು.
Advertisement