
2,000ಕ್ಕೆ 1 ವರ್ಷದ ಮಗುವನ್ನು ಮಾರಿದಳೇ ತಾಯಿ? ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ತಂದೆ
ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬಳ ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಶಂಕೆಯ ಮೇರೆಗೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳು ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಗರದ ಗಾಂಧಿನಗರ ಬಡಾವಣೆ ನಿವಾಸಿ ಇರ್ಫಾನ್ ಪಾಷ ಎಂಬಾತನ ಪತ್ನಿ ನಗ್ಮಾಬಾನು ಮೇಲೆ 2,000ಕ್ಕೆ ಮಾರಾಟ ಮಾಡಿರುವ ಆರೋಪ ಬಂದಿದೆ.
ಇರ್ಫಾನ್ ಪಾಷ ಮತ್ತು ನಗ್ಮಾಬಾನು ಪ್ರೀತಿಸಿ ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಈ ದಂಪತಿ ಮಂಡ್ಯದಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರಿಗೆ ಹಾಜಿರಾಬಾನು ಸೇರಿ ಮೂವರು ಹೆಣ್ಣು ಮಕ್ಕಳಿದ್ದಾರೆ. ಇರ್ಫಾನ್ ಪಾಷ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡಿಕೊಂಡಿದ್ದು, ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ದಂಪತಿ ನಡುವೆ ಕಲಹ ಉಂಟಾಗಿ ಆಗಾಗ ಜಗಳ ನಡೆಯುತ್ತಿತ್ತು. ಬಡಾವಣೆಯ ಹಿರಿಯರು ಪಂಚಾಯ್ತಿ ನಡೆಸಿ ದಂಪತಿಯನ್ನು ಒಂದುಗೂಡಿಸಿದ್ದರು.
ಮಗು ಕೇಳಿದ ಇರ್ಫಾನ್: ವಾರದ ಹಿಂದೆ ನಗ್ಮಾಬಾನು, ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ಇಂದಿರಾ ಕಾಲೋನಿಯಲ್ಲಿರುವ ತನ್ನ ಸ್ನೇಹಿತೆಯ ಮನೆಯಲ್ಲಿ ನೆಲೆಸಿದ್ದಾಳೆ. ನಂತರ ಅದೇ ಕಾಲೋನಿಯಲ್ಲಿರುವ ಪೇಂಟರ್ ಕೆಲಸಗಾರ ಚಾಂದ್ ಪಾಷ ಮತ್ತು ಸಮೀನಾ ದಂಪತಿಗೆ ಹೆಣ್ಣು ಮಗುವನ್ನು ನೀಡಿ, ಖರ್ಚಿಗಾಗಿ ಹಣ ಪಡೆದುಕೊಂಡಿದ್ದಾಳೆ. ಬಳಿಕ ನಗ್ಮಾ, ಜೀವನ ನಿರ್ವಹಣೆಗಾಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ.
ಈ ವಿಷಯ ತಿಳಿದ ಇರ್ಫಾನ್ ಪಾಷ, ಎರಡು ದಿನಗಳ ಹಿಂದೆ ಚಾಂದ್ ಪಾಷ ಅವರ ಮನೆಗೆ ತೆರಳಿ ಮಗುವನ್ನು ನೀಡುವಂತೆ ಕೋರಿದ್ದಾರೆ. ಕೆಲವು ದಿನಗಳ ಮಟ್ಟಿಗೆ ಸಲಹಲು ನಗ್ಮಾಬಾನು ಮಗುವನ್ನು ನೀಡಿ ಹೋಗಿದ್ದಾಳೆ ಎಂದ ಚಾಂದ್ ಪಾಷ, ಆಕೆಯಿಂದಲೇ ಮಗುವನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಮಗು ವಶಕ್ಕೆ
ಮಗು ಸಿಗದಿದ್ದ ಕಾರಣ ಇರ್ಫಾನ್ ಪಾಷ. ಶುಕ್ರವಾರ ಬೆಳಿಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಇಂದಿರಾ ಕಾಲೋನಿಯಲ್ಲಿರುವ ಚಾಂದ್ ಪಾಷ ಅವರಿಗೆ ಗೃಹಿಣಿಯೊಬ್ಬಳು ಹೆಣ್ಣು ಮಗುವನ್ನು 2,000ಕ್ಕೆ ಮಾರಾಟ ಮಾಡಿದ್ದಾಳೆ ಎಂದು ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ದಿವಾಕರ್ ಸೂಚನೆಯಂತೆ ಮಕ್ಕಳ ರಕ್ಷಣಾಧಿಕಾರಿ ನಳಿನಾ, ಸಹಾಯವಾಣಿಯ ಸಿಬ್ಬಂದಿ ಶೋಭಾ, ನಂದಿನಿ, ಚಾಂದ್ ಪಾಷ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಹೆಣ್ಣು ಮಗು ಹಾಜಿರಾಬಾನು ಇರುವುದು ಪತ್ತೆಯಾಗಿದೆ. ಮಗುವನ್ನು ವಶಕ್ಕೆ ಪಡೆದುಕೊಂಡ ಮಕ್ಕಳ ಸಂರಕ್ಷಣಾಧಿಕಾರಿಗಳು, ತಂದೆ ಇರ್ಫಾನ್ ಪಾಷ. ತಾಯಿ ನಗ್ಮಾಬಾನು ಹಾಗೂ ಮಗುವನ್ನು ಸಲಹುತಿದ್ದ ಚಾಂದ್ ಪಾಷ ಸಮೀನಾ ದಂಪತಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ದಂಪತಿ ನಡುವೆ ಕೌಟುಂಬಿಕ ಕಲಹ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮಗು ಮಾರಾಟದ ಶಂಕೆಯ ಮೇರೆಗೆ 1 ವರ್ಷಧ ಹಾಜಿರಾಬಾನುಳನ್ನು ವಶಕ್ಕೆ ತೆಗೆದು ಕೊಂಡಿದ್ದೇವೆ. ಮಕ್ಕಳ ಕಲ್ಯಾಣ ಸಮಿತಿ ಎಂದುರು ಮಗುವನ್ನು ಹಾಜರು ಪಡಿಸಿದ ತರುವಾಯ ಶಿಶುಪಾಲನಾ ಕೇಂದ್ರಕ್ಕೆ ನೀಡಲಾಗುವುದು. ನಂತರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಾರೆ.
-ದಿವಾಕರ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳು, ಮಂಡ್ಯ
ನಾನು ಮಗುವನ್ನು ಮಾರಟ ಮಾಡಿದ್ದೇನೆ ಎಂಬುದು ಸುಳ್ಳು. ಪತಿಯಿಂದ ದೂರವಾದ ಕಾರಣ ಬೇರೆ ಮನೆ ಮಾಡುವ ತನಕ 2-3 ದಿನಗಳವರೆಗೆ ಮಗುವನ್ನು ಸಲಹುವಂತೆ ಚಾಂದ್ ಪಾಷ ಅವರಿಗೆ ನೀಡಿದ್ದೇನೆ. ವೈಯಕ್ತಿ ಖರ್ಚಿಗಾಗಿ 2,000 ಪಡೆದುಕೊಂಡಿದ್ದೇನೆಯೇ ಹೊರತು ಮಗುವನ್ನು ಮಾರಾಟ ಮಾಡಿಲ್ಲ.
-ನಗ್ಮಾಬಾನು, ಮಗುವಿನ ತಾಯಿ
Advertisement