ಸಿಎಂ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಚಿತ್ರ ನಗರಿ?

ಪರಂಪರೆ, ವೈಭವ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರಾದ ಮೈಸೂರು ಒಂದು ಕಾಲದಲ್ಲಿ ಚಲನಚಿತ್ರೀಕರಣಕ್ಕೆ...
ವಿಶ್ವವಿಖ್ಯಾತ ಮೈಸೂರು ದಸರಾ
ವಿಶ್ವವಿಖ್ಯಾತ ಮೈಸೂರು ದಸರಾ

ಮೈಸೂರು: ಪರಂಪರೆ, ವೈಭವ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರಾದ ಮೈಸೂರು ಒಂದು ಕಾಲದಲ್ಲಿ ಚಲನಚಿತ್ರೀಕರಣಕ್ಕೆ ಹೆಸರುವಾಸಿ. ಇನ್ನು ಮುಂದೆ ಕೂಡ ನಿರ್ದೇಶಕರು ಮೈಸೂರನ್ನು ಮತ್ತೆ ಅರಸಿ ಬರಬಹುದು, ಏಕೆಂದರೆ, ಮೈಸೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರ ನಗರಿಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯನವರು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಆಡಳಿತಕ್ಕೆ ಯೋಜನೆಗೆ ಪೂರಕವಾದ ಜಾಗವನ್ನು ಪತ್ತೆ ಹಚ್ಚಲು ಸೂಚಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ವರುಣಾದ ಹೇಮಾವು ಗ್ರಾಮದಲ್ಲಿ ೫೦೦ ಎಕರೆ ಜಾಗವನ್ನು ಜಿಲ್ಲಾ ಆಡಳಿತ ಗುರುತು ಮಾಡಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರಕ್ಕೆ ಹತ್ತಿರದಲ್ಲಿರುವ ಹೆಸರುಘಟ್ಟದಲ್ಲಿ ಈ ಹಿಂದೆ ಫಿಲ್ಮ್ ಸಿಟಿ ಸ್ಥಾಪಿಸಬೇಕು ಎನ್ನುವ ಪ್ರಸ್ತಾವಾನೆಗೆ ಸುಪ್ರೀಂ ಕೋರ್ಟ್ ಅಡ್ಡಿ ಮಾಡಿತ್ತು.

ಜಾಗವನ್ನು ಅಂತಿಮಗೊಳಿಸಲು ಖ್ಯಾತ ನಿರ್ದೇಶಕರು ಮತ್ತು ಚಲನಚಿತ್ರ ಕ್ಷೇತ್ರದ ಹಿರಿಯರ ಜೊತೆ ಜಿಲ್ಲಾಡಳಿತ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಹಲವಾರು ಚಿತ್ರನಿರ್ದೇಶಕರು ಬೆಂಗಳೂರಿನಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಒಲವು ತೋರಿದ್ದರೂ, ಸುಪ್ರೀಂ ಕೋರ್ಟ್ ನಿರ್ದೇಶನ ಇರುವುದರಿಂದ ಮೈಸೂರಿಗೆ ರಾಜಿಯಾಗಬೇಕಿದೆ.

೮೦ರ ದಶಕದಲ್ಲಿ ಸಾಕಷ್ಟು ದಕ್ಷಿಣ ಭಾರತೀಯ ಸಿನೆಮಾಗಳು ಮತ್ತು ಕೆಲವು ಬಾಲಿವುಡ್ ಸಿನೆಮಾಗಳು ಮೈಸೂರಿನ ಪ್ರೀಮಿಯರ್ ಸ್ಟುಡಿಯೋಗಳಲ್ಲೆ ಚಿತ್ರೀಕರಣಗೊಳ್ಳುತ್ತಿದ್ದವು, ಆದರೆ ನಂತರದ ದಿನಗಳಲ್ಲಿ ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಬೆಂಗಳೂರಿಗೆ ನೆಲೆ ಬದಲಾಯಿತು.

ಈ ಪ್ರದೇಶದಲ್ಲಿ ಚಿತ್ರ ನಗರಿ ಸ್ಥಾಪಿಸುವುದಕ್ಕೆ ಇರುವ ಸಾಮರ್ಥ್ಯದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾಗರಿಕ ಸೇವೆಗಳ ಸಚಿವ ಎಚ್ ಸಿ ಮಹದೇವಪ್ಪ ಅವರ ಜೊತೆ ಭಾನುವಾರ ಮಾತುಕತೆ ನಡೆಸಿರುವುದು ತಿಳಿದು ಬಂದಿದೆ.

ಮೈಸೂರಿನ ಸುತ್ತ ಮುತ್ತ ಸುಮಾರು ೨೫೦ ಪ್ರವಾಸಿ ತಾಣಗಳಿದ್ದು, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ನಾಗರ ಹೊಳೆ, ಬಂಡೀಪುರ, ಸೋಮನಾಥ ದೇವಸ್ಥಾನ, ಕಾವೇರಿ ನದಿ, ತಲಕಾಡು ಮುಂತಾದ ಪ್ರವಾಸಿ ಸ್ಥಾನಗಳು ಚಿತ್ರೀಕರಣಕ್ಕೆ ಪೂರಕವಾಗಿವೆ ಎನ್ನುತ್ತಾರೆ ಸಿಂಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com