ಮೇಕೆದಾಟುಗೆ ಅರಣ್ಯ ಇಲಾಖೆ ವಿರೋಧ

ಹುಲಿ ಮತ್ತು ಆನೆಗಳ ಅತಿ ದೊಡ್ಡ ಆವಾಸಸ್ಥಾನವಾಗಿ ಹೊರಹೊಮ್ಮುವ ಎಲ್ಲ ಪೂರಕ ಲಕ್ಷಣಗಳನ್ನು ಹೊಂದಿದೆ...
ಮೇಕೆದಾಟು
ಮೇಕೆದಾಟು

ಬೆಂಗಳೂರು: ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕಾವೇರಿ ಕೊಳ್ಳದ ಮೇಕೆದಾಟು ನೀರಾವರಿ ಯೋಜನೆಗೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಮಾತನಾಡಿದ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ ಲೂತ್ರ, ಮೇಕೆದಾಟು ನೀರಾವರಿ ಯೋಜನೆಯಿಂದಾಗಿ ಕಾವೇರಿ ವನ್ಯಜೀವಿ ಧಾಮದಲ್ಲಿ ನೂರಾರು ಎಕರೆ ಕಾಡು ಮುಳುಗಡೆಯಾಗಲಿದೆ. ಪರಿಸರಕ್ಕೆ ಧಕ್ಕೆ ತರುವ ಈ ಯೋಜನೆಗೆ ಅರಣ್ಯ ಇಲಾಖೆಯ ವಿರೋಧವಿದೆ ಎಂದು ಹೇಳಿದರು.

ಇಡೀ ಕಾವೇರಿ ವನ್ಯ ಜೀವಿ ವಿಭಾಗ ಹುಲಿ ಮತ್ತು ಆನೆಗಳ ಅತಿ ದೊಡ್ಡ ಆವಾಸಸ್ಥಾನವಾಗಿ ಹೊರಹೊಮ್ಮುವ ಎಲ್ಲ ಪೂರಕ ಲಕ್ಷಣಗಳನ್ನು ಹೊಂದಿದೆ. ಈ ಭಾಗದಲ್ಲಿ ಇಲಾಖೆ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಅತ್ಯಂತ ಅಪರೂಪದ ವನ್ಯಜೀವಿಗಳು ಪತ್ತೆಯಾಗಿವೆ. ಸರ್ಕಾರವೇ ಕಾವೇರಿ ವನ್ಯಜೀವಿ ಧಾಮವನ್ನು ಸಂರಕ್ಷಿಸಿ ಅಭಿವೃದ್ಧಿಪೃಡಿಸಲು ಸಾಕಷ್ಟು ಕ್ರಮಗಳನ್ನು ಕೊಗೊಂಡಿದೆ. ಆದ್ದರಿಂದ ಇಲ್ಲಿ ನೀರಾವರಿ ಯೋಜನೆ ಬಂದಲ್ಲಿ ಜೀವಿ ವೈವಿಧ್ಯಕ್ಕೆ ಧಕ್ಕೆ ಬರುತ್ತದೆ ಎಂದರು.

ಮೇಕೆದಾಟು ನೀರಾವರಿ ಯೋಜನೆಯಿಂದಾಗಿ ಕಾವೇರಿ ಕಣಿವೆಯಲ್ಲಿ ಬೃಹತ್ ಹಿನ್ನೀರು ಸೃಷ್ಟಿಯಾಗುತ್ತದೆ. ಈ ಹಿನ್ನೀರು ಭಾರಿ ಪ್ರಮಾಣದ ಕಾಡನ್ನು ಮುಳುಗಡೆ ಮಾಡುವುದಷ್ಟೇ ಅಲ್ಲ, ಕಾಡನ್ನು ಛಿದ್ರಗೊಳಿಸುತ್ತದೆ. ಅಲ್ಲದೇ, ವನ್ನಜೀವಿಗಳ ಓಡಾಟಕ್ಕೆ ಕಡಿವಾಣ ಹಾಕುತ್ತದೆ. ಈಗಾಗಲೇ ರಾಜ್ಯದ ಅನೇಕ ನೀರಾವರಿ ಯೋಜನೆಗಳಿಂದಾಗಿ ಅರಣ್ಯ ಪ್ರದೇಶಗಳ ಮೇಲೆ ಆಗಿರುವ ಪರಿಣಾಮವನ್ನು ರಾಜ್ಯ ಅನುಭವಿಸಿದೆ. ಆದ್ದರಿಂದ ಈ ಯೋಜನೆ ಸೂಕ್ತವಲ್ಲ ಅಂತ ಪಿಸಿಸಿಎಫ್ ವಿನಯ ಲೂತ್ರ ಹೇಳಿದರು.

ಸರಿಸುಮಾರು 1 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ಕಾವೇರಿ ವನ್ಯಜೀವಿ ಧಾಮ ಕನಕಪುರದಿಂದ ಶುರುವಾಗಿ ಮಲೆಮಹದೇಶ್ವರ ಬೆಟ್ಟದವರೆಗೂ ಹಬ್ಬಿದೆ. ಮೀಸಲು ಅರಣ್ಯವಾಗಿದ್ದ ಈ ಪ್ರದೇಶವನ್ನು ಸರ್ಕಾರ ಕಳೆದ ವರ್ಷ ವನ್ಯಜೀವಿ ಧಾಮವನ್ನಾಗಿ ಘೋಷಿಸಿದೆ. ಕಾವೇರಿ ಕೊಳ್ಳದಲ್ಲಿರುವುದರಿಂದ ಈ ಭಾಗದಲ್ಲಿ ಸಂರಕ್ಷಣೆ ಬಿಗಿ ಕ್ರಮ ಕೈಗೊಂಡ ಕಾರಣ ಇಡೀ ಕಾವೇರಿ ವನ್ಯಜೀವಿ ಧಾಮ ದಿನೇ ದಿನೇ ಅದ್ಭುತ ಜೀವವೈವಿಧ್ಯಮಯ ತಾಣವಾಗಿ ರೂಪುಗೊಳ್ಳುತ್ತಿದೆ.

ಕ್ಯಾಮೆರಾ ಟ್ಯ್ರಾಪ್ ಬಳಸಿ ಜೀವಿ ವಿಜ್ಞಾನಿ ಸಂಜಯ ಗುಬ್ಬಿ ಈ ಭಾಗದಲ್ಲಿ ನಡೆಸುತ್ತಿರುವ ಸಂಶೋಧನೆಯಲ್ಲೂ ಹುಲಿ, ಚಿರತೆ, ಆನೆಗಳು, ಸೀಳುನಾಯಿ ಮುಂತಾದ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳಗೊಂಡಿರುವುದು ಕಂಡು ಬಂದಿದೆ. ಈ ಹಿಂದೆ ಈ ಕಾಡಿನಲ್ಲಿ ಅತಿ ವಿರಳವಾಗಿದ್ದ ಹುಲಿ ಸಂತತಿ ಈಗ ಹೆಚ್ಚಳಗೊಂಡಿದೆ.

ದಕ್ಷಿಣ ಭಾರತದಲ್ಲಿ ಎಲ್ಲೂ ಕಾಣಿಸಿರುವ ಅತಿ ವಿರಲ ತಾರಾ ಕರಡಿ(ರ್ಯಾಟೆಲ್) ಎನ್ನುವ ಪ್ರಾಣಿ ಇದೇ ಮೊದಲ ಬಾರಿ ಕಾವೇರಿ ವನ್ಯಜೀವಿ ಧಾಮದಲ್ಲಿ ಕಾಣಿಸಿಕೊಂಡಿದೆ. ಆನೆಗಳಿಗೂ ಇದು ಅತ್ಯುತ್ತಮ ಆವಾಸ ಸ್ಥಾನ. ಹೀಗೆ ಅನೇಕ ವನ್ಯಜೀವಿಗಳಿಗೆ ಉತ್ತಮ ತಾಣವಾಗಿ ರೂಪುಗೊಂಡಿರುವ ಕಾವೇರಿ ವನ್ಯ ಧಾಮ ಮುಂದಿನ ದಿನಗಳಲ್ಲಿ ಬಂಡೀಪುರ, ನಾಗರ ಹೊಳೆ ರಾಷ್ಟ್ರೀಯ ಉದ್ಯಾನಗಳನ್ನೂ ಮೀರಿಸುವ ಅರಣ್ಯವಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳಿವೆ.

ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆಯ ಬಿಗಿ ಕ್ರಮಗಳಿಂದಾಗಿ ಇಡೀ ಅರಣ್ಯ ಪುನರುತ್ಥಾನಗೊಂಡಿದೆ. ಮೇಕೆದಾಟು ನೀರಾವರಿ ಯೋಜನೆ ಮಾಡುವುದರಿಂದ ಈ ಭಾಗದ ಜೀವವೈವಿಧ್ಯತೆಗೆ ಭಾರಿ ಹಾನಿ ಸಂಭವಿಸುತ್ತದೆ. ಅರಣ್ಯ ಮುಳುಗಡೆಯಾಗಿ, ಛಿದ್ರಗೊಳ್ಳುತ್ತದೆ. ಸರ್ಕಾರ ಕುಡಿಯುವ ನೀರಿಗೆ ಪರ್ಯಾಯ ಯೋಜನೆ ರೂಪಿಸಿ ಮೇಕೆದಾಟು ಯೋಜನೆ ಕೈಬಿಡುವುದು ಒಳ್ಳೆಯದು.
-ಸಂಜಯ್ ಗುಬ್ಬಿ, ವನ್ಯಜೀವಿ ವಿಜ್ಞಾನಿ

ಕಾವೇರಿ ನದಿಯ ನೈಸರ್ಗಿಕ ಹರಿವನ್ನು ನಾವು ಅಡ್ಡಗಟ್ಟಿಸಿದ್ದೇವೆ. ಇಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ಮುಳುಗಡೆಯಾಗುತ್ತದೆ. ಕಾಡು ಮಾತ್ರವಲ್ಲ, ಅನೇಕ ಗ್ರಾಮಗಳು ಮುಳುಗಡೆಯಾಗುತ್ತವೆ. ಈಗಾಗಲೇ ಕಾಡುಗಳನ್ನು ಛಿದ್ರಗೊಳಿಸಿದ್ದೇವೆ. ಜಲಾಶಯ ನಿರ್ಮಾಣ ಮಾಡೋದ್ದರಿಂದ ಅನಾಹುತ ಆಗುತ್ತೆ ಅನ್ನೋದನ್ನ ಮನಗಂಡು ಎಲ್ಲಾ ಕಡೆ ಡ್ಯಾಮ್ ಬೇಡ ಅಂತಿದ್ದಾರೆ. ಸರ್ಕಾರ ಈ ಯೋಜನೆ ಕೈ ಬಿಡಬೇಕು.
-ಎ.ಎನ್‌ಯಲ್ಲಪ್ಪ ರೆಡ್ಡಿ, ಪರಿಸರವಾದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com