ಕೊಠಡಿಗೆ ಮಾಹಿತಿ ಆಯುಕ್ತರ ಕಚ್ಚಾಟ

ಪ್ರತಿದಿನ ಕನಿಷ್ಠ 30 ಕೇಸ್‌ಗಳ ವಿಚಾರಣೆ ನಡೆಯಬೇಕು. ನಡೆಯುತ್ತಿರುವುದು 15 ಕೇಸ್ ಮಾತ್ರ
ರಾಜ್ಯ ಮಾಹಿತಿ ಹಕ್ಕು ಆಯೋಗ
ರಾಜ್ಯ ಮಾಹಿತಿ ಹಕ್ಕು ಆಯೋಗ

ಬೆಂಗಳೂರು: ಮಾಹಿತಿ ಸಿಗದವರಿಗೆ ನ್ಯಾಯ ಒದಗಿಸಬೇಕಾದ ರಾಜ್ಯ ಮಾಹಿತಿ ಹಕ್ಕು ಆಯುಕ್ತರೇ ಕಚ್ಚಾಟಕ್ಕೆ ಇಳಿದಿದ್ದಾರೆ! ಕೊಠಡಿಗಾಗಿ ತೊಡೆತಟ್ಟಿ ಕಾದಾಟ ಶುರು ಮಾಡಿದ್ದಾರೆ.
ಒಬ್ಬ ಆಯುಕ್ತರಿಗೆ ನಿಗದಿಯಾಗಿರುವ ಒಂದೇ ಕೊಠಡಿಗೆ ಈ ಇಬ್ಬರೂ ನಾಮಫಲಕಗಳನ್ನು ಅಳವಡಿಸಿ ಕೊಂಡಿದ್ದಾರೆ. ಆ ಕೊಠಡಿಯಲ್ಲೇ ಇಬ್ಬರೂ ಕುಳಿತು ಹಾಜರಿಗೆ ಸಹಿ ಮಾಡುತ್ತಿದ್ದಾರೆ.

ಹೈಕೋರ್ಟ್ ನ್ಯಾಯಾಧೀಶರಿಗೆ ಸಮನಾದ ಇವರು ಕೇವಲ ಕೊಠಡಿಗಾಗಿ ಕಚ್ಚಾಟಕ್ಕೆ ಇಳಿದಿರುವುದು ಆಯೋಗದ ಅಧಿಕಾರಿಗಳ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಾಗೆಯೇ ಇಬ್ಬರೂ ಆಯುಕ್ತರಿಗೂ ಪೂರಕ ಸೇವೆ ಒದಗಿಸಬೇಕಾದ ಅಧೀನ ಅಧಿಕಾರಿಗಳಿಗೂ ಉಭಯ ಸಂಕಟ ಶುರುವಾಗಿದೆ. ಇದರಿಂದ ಮಾಹಿತಿ ಆಯುಕ್ತರಿಗೆಂದೇ ಮೀಸಲಿಟ್ಟಿರುವ ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿಯಲ್ಲಿ ಸುಸಜ್ಜಿತ ಕೊಠಡಿ ಖಾಲಿ ಹೊಡೆಯುತ್ತಿದ್ದು, ಅದಕ್ಕಾಗಿ ಪಾವತಿಸುತ್ತಿರುವ (ತಿಂಗಳಿಗೆ ರೂ. ಲಕ್ಷ) ಬಾಡಿಗೆ ವ್ಯರ್ಥವಾಗುತ್ತಿದೆ.

ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತ್ತೀಚೆಗೆ ಇಬ್ಬರು ಆಯುಕ್ತರ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಿತ್ತು. ಆಕಾಂಕ್ಷಿಗಳ ಪಟ್ಟಿ ಪರಿಶೀಲಿಸಿದ ಇಲಾಖೆ ನಿವೃತ್ತ ಕೆಎಎಸ್ ಅಧಿಕಾರಿ ಶಂಕರ್ ಪಾಟೀಲ್ ಹಾಗೂ ವಿಕಲಾಂಗ ಕಲ್ಯಾಣ ಇಲಾಖೆ ಸೇವೆಯಲ್ಲಿದ್ದ ಎಲ್.ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಿತ್ತು.

ಇದನ್ನು ರಾಜ್ಯಪಾಲರು ಆನುಮೋದಿಸಿದರು. ನಂತರ ಈ ಇಬ್ಬರೂ ಆಯುಕ್ತರಿಗೂ ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿಯನ್ನೂ ಕೊಡಿಸಲಾಯಿತು.

ಇದೆಲ್ಲವನ್ನೂ ಮುಗಿಸಿ ಬರುವಷ್ಟರಲ್ಲಿ ಇವರಿಗೆ ಇಲಾಖೆ ಕೊಠಡಿಗಳನ್ನು ನಿಗದಿ ಮಾಡಿತ್ತು. 7 ಆಯುಕ್ತರಿಗೂ ಬೆಂಗಳೂರಿನಲ್ಲಿ ನೀಡಲಾಗಿದ್ದ ಕೊಠಡಿಗಳ ಪೈಕಿ ಎರಡು ಖಾಲಿಯಾಗಿದ್ದವು. ಅವುಗಳನ್ನು ಈ ನೂತನ ಆಯುಕ್ತರಿಗೆ ನೀಡಲಾಯಿತು. ಅಂದರೆ, ಮಿಥಿಕ್ ಸೊಸೈಟಿಯಲ್ಲಿ ಆಯೋಗ ಬಾಡಿಗೆಗೆ ಪಡೆದಿರುವ ಕೊಠಡಿಯನ್ನು ಆಯುಕ್ತ ಶಂಕರ್ ಪಾಟೀಲ್ ಅವರಿಗೆ ನೀಡಲಾಯಿತು. ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಕೊಠಡಿಗೆ ಆಯುಕ್ತ ಕೃಷ್ಣಮೂರ್ತಿ ಅವರಿಗೆ ಹಂಚಿಕೆ ಮಾಡಲಾಯಿತು.

ಎಂದಿನಂತೆ ಕೃಷ್ಣಮೂರ್ತಿ ಅವರು ತಮಗೆ ನಿಗದಿಗೊಳಿಸಿದ್ದ ಎಂ.ಎಸ್.ಬಿಲ್ಡಿಂಗ್ ಕೊಠಡಿಯಲ್ಲಿ ಕುಳಿತುಕೊಳ್ಳಲಾರಂಬಿಸಿದರು. ಅದೇ ರೀತಿ ಆಯುಕ್ತ ಶಂಕರ್ ಪಾಟೀಲ್ ಮಿಥಿಕ್ ಸೊಸೈಟಿಯ ಕೊಠಡಿಗೆ ಹೋದರು. ಆದರೆ ಅಲ್ಲೇ ಕುಳಿತು ಕಾರ್ಯ ನಿರ್ವಹಿಸಲಿಲ್ಲ. ಆಯುಕ್ತ ಕೃಷ್ಣಮೂರ್ತಿ ಅವರಿಗೆ ಎಂ.ಎಸ್.ಬಿಲ್ಡಿಂಗ್‌ನಲ್ಲಿ ನಿಗದಿಯಾಗಿದ್ದ ಕೊಠಡಿಯಲ್ಲೇ ಬಂದು ಕುಳಿತರು. ಅದೇ ಕೊಠಡಿಗೆ ತಮ್ಮ ಹೆಸರಿನ ನಾಮಫಲಕವನ್ನೂ ಅಳವಡಿಸಿದರು. ಇದರಿಂದ ಒಂದೇ ಕೊಠಡಿಗೆ ಇಬ್ಬರೂ ಆಯುಕ್ತರು ಕಚ್ಚಾಡುವುದು ಬಹಿರಂಗವಾಯಿತು.

ಮುಖ್ಯ ಆಯುಕ್ತರ ಆದೇಶದಂತೆ ಒಬ್ಬ ಆಯುಕ್ತರು ದಿನಕ್ಕೆ 30 ಕೇಸು ವಿಚಾರಣೆ ನಡೆಸಬೇಕು. ಈಗ ವಿಚಾರಣೆ ನಡೆಯುತ್ತಿರುವುದು ಬರೀ 15 ಕೇಸುಗಳು. ಹೀಗಾಗಿ ಆಯೋಗದಲ್ಲಿ ಈಗ ನಿರೀಕ್ಷಿತ ರೀತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ ಎನ್ನುತ್ತಾರೆ ಮಾಹಿತು ಹಕ್ಕು ಹೋರಾಟಗಾರರು.

ಇಂಥ ಸಂದರ್ಭಗಳಲ್ಲಿ ಆಯೋಗದ ಮುಖ್ಯ ಆಯುಕ್ತರು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಸೂಕ್ತ ಆದೇಶ ನೀಡಿ ನಿಗದಿತ ಕೊಠಡಿಗೆ ಹೋಗುವಂತೆ ಸೂಚಿಸಬೇಕಾಗುತ್ತದೆ. ಇದರಿಂದ ದೈನಂದಿನ ಕಾರ್ಯಕ್ಕೆ ತೊಂದರೆಯಾಗದಂತೆ  ನೋಡಿಕೊಳ್ಳಬೇಕಾಗುತ್ತದೆ.
-ಎ.ಆರ್.ಶಿವಕುಮಾರ್, ಮಾಹಿತಿ ಹಕ್ಕು ಹೋರಾಟಗಾರ

ಮಿಥಿಕ್ ಸೊಸೈಟಿಯ ಕಟ್ಟಡದ ಕೊಠಡಿಯಲ್ಲಿ ಇಲಿಗಳ ಕಾಟವಿದೆ. ಅದನ್ನು ನವೀಕರಣಗೊಳಿಸಲಾಗುತ್ತಿದೆ. ನವೀಕರಣ ಕಾರ್ಯ ಮುಗಿಯುತ್ತಿದ್ದಂತೆ ಹೋಗುತ್ತೇವೆ. ಅಲ್ಲಿವರೆಗೂ ಒಂದೇ ಕೊಠಡಿಯಲ್ಲೇ ಹೊಂದಾಣಿಕೆಯಿಂದಲೇ ಕುಳಿತಿದ್ದೇವೆ.
ಎಲ್.ಕೃಷ್ಣಮೂರ್ತಿ, ಮಾಹಿತಿ ಹಕ್ಕು ಆಯುಕ್ತ

ಶಿವಕುಮಾರ್ ಬೆಳ್ಳಿತಟ್ಟೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com