ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಪಟ್ಟಿ
ಬೆಂಗಳೂರು: ಜಾಲಹಳ್ಳಿ ಖಾಸಗಿ ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸ್ ಅಧಿಕಾರಿಗಳು ಶನಿವಾರ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಮಲ್ಲೇಶ್ವರ ಉಪ ವಿಭಾಗ ಎಸಿಪಿ ಸಾರಾ ಫಾತಿಮಾ ನೇತೃತ್ವದ ತಂಡ ತನಿಖೆ ನಡೆಸಿ ಶಾಲೆಯ ಅಟೆಂಡರ್ ಗುಂಡಪ್ಪ(45) ವಿರುದ್ಧ 140 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.
ಅಕ್ಟೋಬರ್ 21ರಂದು ಜಾಲಹಳ್ಳಿ ಖಾಸಗಿ ಶಾಲೆಯೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಮನೆಗೆ ಹೋಗಿದ್ದ ಬಾಲಕಿಗೆ ಮಧ್ಯಾಹ್ನ ಜ್ವರ ಕಾಣಿಸಿಕೊಂಡಿದ್ದರಿಂದ ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿತ್ತು.
ಈ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ನೀಡಿದ ದೂರಿನ ಮೇಲೆ ಜಾಲಹಳ್ಳಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು.
ಶಾಲೆಯ ಪಾಲಕರು ಹಾಗೂ ಸಾರ್ವಜನಿಕ ವಲಯದಲ್ಲಿ ತ್ರೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣದ ಬಗ್ಗೆ ಎಸಿಪಿ ಸಾಸಾ ಫಾತಿಮಾ ನೇತೃತ್ವದ ತಂಡ ತನಿಖೆ ನಡೆಸಿ, ಬಾಲಕಿ ಹೇಳಿಕೆ ಹಾಗೂ ಗುರುತು ಹಿಡಿದ ಹಿನ್ನೆಲೆಯಲ್ಲಿ ಅಟೆಂಡರ್ ಗುಂಡಪ್ಪನನ್ನು ಬಂಧಿಸಲಾಗಿತ್ತು. ಕೃತ್ಯ ನಡೆದ ತಿಂಗಳೊಳಗೆ ಆರೋಪಪಟ್ಟಿ ಸಲ್ಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ