ಟಿವಿ9 ವಾಹಿನಿಗಳ ಪ್ರಸಾರ ಸ್ಥಗಿತ

ನಗರ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ...
ಟಿವಿ9 ವಾಹಿನಿಗಳ ಪ್ರಸಾರ ಸ್ಥಗಿತ

ಬೆಂಗಳೂರು: ನಗರ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸುದ್ದಿವಾಹಿನಿಗಳಾದ ಟಿವಿ9 ಹಾಗೂ ನ್ಯೂಸ್9 ಚಾನೆಲ್‌ಗಳ ಪ್ರಸಾರವನ್ನು ಸೋಮವಾರ ಸಂಜೆಯಿಂದ ಸ್ಧಗಿತಗೊಳಿಸಲಾಗಿದೆ.

ಕೆಲ ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಸಭೆ ನಡೆದಿತ್ತು. ಈ ವೇಳೆ ಎರಡೂ ಸುದ್ದಿವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸುವಂತೆ ಆದೇಶಿಸಿದ್ದರು. ಇಲ್ಲವಾದರೆ ಕೇಬಲ್ ಸಂಸ್ಥೆಗಳ ಮೇಲೆ ಭಾರಿ ತೆರಿಗೆ ಹಾಗೂ ದಂಡ ವಿಧಿಸುವುದಾಗಿ ಸಚಿವರು ಹೇಳಿದ್ದರೆಂದು ಚಾನೆಲ್ ಆರೋಪಿಸಿದೆ.

ಆಪರೇಟರ್‌ಗಳಿಗೆ ಸಂದೇಶ: ಹಲವು ದಿನಗಳಿಂದ ಕೇಬಲ್ ಉದ್ಯಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಟಿವಿ 9 ಸಂಸ್ಥೆ ಕೆಲಸ ಮಾಡುತ್ತಿದೆ. ಸರ್ಕಾರದ ವಿರುದ್ಧ ಅನಗತ್ಯ ಸುದ್ದಿ ಪ್ರಸಾರ ಮಾಡುತ್ತಿದ್ದು, ಇದು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕೇಬಲ್ ಆಪರೇಟರ್‌ಗಳ ಸಂಘಟನೆ ಸದಸ್ಯರಿಗೆ ಕಳುಹಿಸಿರುವ ಸಂದೇಶದಲ್ಲಿ ಹೇಳಿದೆ.

ಈಗಾಗಲೇ ನಾವು ಸರಿಯಾದ ಮಾರ್ಗದಲ್ಲಿ ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಹಾಕಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಲ್ಲದೆ ತೆರಿಗೆ ಹೆಚ್ಚಳ ಮಾಡದಂತೆ ಕೋರಿದ್ದೆವು. ಇದಕ್ಕೆ ಸರ್ಕಾರವೂ ಸೂಕ್ತವಾಗಿ ಸ್ಪಂದಿಸುತ್ತಿತ್ತು. ಡಿಜಿಟಲೈಜೇಶನ್‌ನಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ಭರಿಸುವ ಸ್ಥಿತಿಯಲ್ಲಿ ನಾವಿಲ್ಲ.

ಹೀಗಾಗಿ ಟಿವಿ9 ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತನಾಡಿ, ಸರ್ಕಾರಿ ವಿರೋಧಿ ಕಾರ್ಯಕ್ರಮಗಳ ಮಾಡದಂತೆ ಮನವಿ ಮಾಡಿದ್ದೆವು. ಆದರೂ ನಮ್ಮ ಮನವಿ ಪರಿಗಣಿಸಿಲ್ಲ. ಹೀಗಾಗಿ ಎಲ್ಲೆಡೆ ಟಿವಿ9, ನ್ಯೂಸ್9 ವಾಹಿನಿಗಳನ್ನು ಮುಂದಿನ ಸೂಚನೆವರೆಗೂ ಬಂದ್ ಮಾಡಿ ಎಂಬ ಸಂದೇಶವನ್ನು ಆಪರೇಟರ್‌ಗಳಿಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎರಡು ವಾಹಿನಿಗಳು ಬರುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com