ರಾಜ್ ಸ್ಮಾರಕ ಉದ್ಘಾಟನೆ ನಾಳೆ

ವರನಟ ಡಾ.ರಾಜ್‌ಕುಮಾರ್ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ...
ರಾಜ್ ಸ್ಮಾರಕ ಉದ್ಘಾಟನೆ ನಾಳೆ

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಸಮಾಧಿ ಸ್ಥಳ ನಗರದ ಕಂಠೀರವ ಸ್ಟುಡಿಯೊ ಆವರಣ ಹಾಗೂ ಅರಮನೆ ಆವರಣದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಸ್ಮಾರಕ ಉದ್ಘಾಟನೆ ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯುತ್ತಿದೆ. ವಿಶೇಷವಾಗಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ದಕ್ಷಿಣ ಭಾರತದ ಹೆಸರಾಂತ ನಟರಾದ ರಜನೀಕಾಂತ್, ಮಮ್ಮೂಟಿ, ಮೋಹನ್‌ಲಾಲ್, ಹಾಗೂ ಚಿರಂಜೀವಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಹೀಗಾಗಿ ಡಾ.ರಾಜ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ಅವರ ಅಭಿಮಾನಿಗಳು ಹಾಗೂ ಕನ್ನಡ ಚಿತ್ರ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಈಗಾಗಲೇ ಸಮಾರಂಭಕ್ಕೆ ಮಮ್ಮೂಟಿ, ರಜನೀಕಾಂತ್ ಭಾಗವಹಿಸುವುದು ಖಾತರಿ ಆಗಿದೆ. ಸೂಪರ್ ಸ್ಟಾರ್ ರಜನೀಕಾಂತ್ ಗುರುವಾರವೇ ನಗರಕ್ಕೆ ಆಗಮಿಸಿದ್ದಾರೆ. ಮೂಲಗಳ ಪ್ರಕಾರ ಅವರು ನ.29ರ ತನಕ ತವರು ನೆಲದಲ್ಲಿಯೇ ಉಳಿಯಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಅವರು ಎಲ್ಲಿ ಉಳಿದು ಕೊಳ್ಳುತ್ತಾರೆಂಬುದನ್ನು ಗೌಪ್ಯವಾಗಿಡಲಾಗಿದೆ.

ಶನಿವಾರ ಬೆಳಗ್ಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸಮಾಧಿ ಸ್ಥಳದಲ್ಲಿ ಸ್ಮಾರಕ ಉದ್ಘಾಟನೆ ಆಗಲಿದೆ. ಅಲ್ಲಿನ ಕಾರ್ಯಕ್ರಮಕ್ಕೆ ಎಲ್ಲ ಸಿದ್ಥತೆಗಳು ನಡೆದಿವೆ. ರಾಜ್ ಪ್ರತಿಮೆ ಅನಾವರಣ ಆಗಲಿದ್ದು, ಈಗಾಗಲೇ ಪ್ರತಿಮೆ ನಿರ್ಮಾಣವೂ ಮುಗಿದಿದೆ. ಇನ್ನು ಅವತ್ತು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವೇ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ. ಇದಕ್ಕಾಗಿ ಅರಮನೆ ಆವರಣದ ತ್ರಿಪುರ ವಾಸಿನಿ ಬಳಿ ಭವ್ಯವಾದ ವೇದಿಕೆ ಸಿದ್ಧಗೊಳ್ಳುತ್ತಿದೆ.

ಗುರುವಾರ ನೂರಕ್ಕೂ ಹೆಚ್ಚು ಜನರು ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಇ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಭದ್ರತೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಕೂರಲು ಪ್ರತ್ಯೇಕ ವಿಭಾಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗಣ್ಯರಿಗೆ ವಿಶೇಷ ಆಸನಗಳು ಕಾದಿರಿಸಲಿವೆ. ಉಳಿದಂತೆ ವೇದಿಕೆಯಿಂದ 200 ಮೀಟರ್ ದೂರವೇ ಜನರು ಕೂರಲು ಆಶನಗಳ ವ್ಯವಸ್ಥೆ ಮಾಡಲಾಗುತ್ತಿದೆ.

ವಾಹನ ನಿಲುಗಡೆ
ಡಾ.ರಾಜ್‌ಕುಮಾರ್ ಸ್ಮಾರಕದ ಎದುರು, ರಿಂಗ್ ರಸ್ತೆಯಲ್ಲಿ ರಸ್ತೆಯ ಎಡಬದಿಯಲ್ಲಿ ಒಂದು ಪಥ

ಪ್ರಸಾದ್ ಸ್ಟುಡಿಯೋ ಆವರಣದ ಒಳಗೆ ಸಮಾರಂಭಕ್ಕೆ ಆಗಿಮಿಸುವ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆ

ಮಾರ್ಗ ಬದಲು
ಕೃಷ್ಣಾನಂದ ಸರ್ಕ್‌ಲ್ ಕಡೆಯಿಂದ ಎಫ್.ಟಿ.ಐ ವೃತ್ತ(ತುಮಕೂರು ರಸ್ತೆ) ಕಡೆಗೆ ಸಂಚರಿಸುವ ವಾಹನಗಳು ಕೃಷ್ಣಾನಂದ ವೃತ್ತ-ಬಲ ತಿರುವು, ತುಮಕೂರು ರಸ್ತೆ ಸೇರಿ ಸಂಚರಿಸಬಹುದಾಗಿದೆ.

ಪೀಣ್ಯ ಕಡೆಯಿಂದ ಎಫ್.ಟಿ.ಐ ವೃತ್ತ (ತುಮಕೂರು ರಸ್ತೆ)ಕಡೆಗೆ ಸಂಚರಿಸುವ ವಾಹನಗಳು ಪೀಣ್ಯ 2ನೇ ಹಂತ ಸೋನಾಲ್ ಗಾರ್ಮೆಟ್ ರಸ್ತೆ, ಇ.ಎಸ್.ಐ, ಜಂಕ್ಷನ್ ಬಲಿ ಎಡತಿರುವು ಪಡೆದು ತುಮಕೂರು ರಸ್ತೆ ಸೇರಬಹುದು.

ಸುಮನಹಳ್ಳಿ ಜಂಕ್ಷನ್ ಮೇಲು ಸೇತುವೆ ಕೆಳಭಾಗದ ಕಡೆಯಿಂದ ಎಫ್.ಟಿ.ಐ, ಕಡೆಗೆ ಸಂಚರಿಸುವ ಸರಕು ಸಾಗಾಣಿಕಾ ವಾಹನಗಳು/ಲಾರಿಗಳು ಸುಮನಹಳ್ಳಿ ಜಂಕ್ಷನ್ ಬಳಿ ಬಲತಿರವು ಮಾಗಡಿ ಮುಖ್ಯರಸ್ತೆ ಸೇರಿ ಕಾಮಾಕ್ಷಿಪಾಳ್ಯದ ಕಡೆಗೆ ಸಂಚರಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com