ಕಿಸ್ ಡೇ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ನೈತಿಕ ಪೊಲೀಸ್ ಗಿರಿ ವಿರೋಧಿಸಿ ದಿ. ಪುಟ್ಟಣ್ಣ ಚೆಟ್ಟಿ ಪುರಭವನದ...
ಕಿಸ್ ಆಫ್ ಲವ್
ಕಿಸ್ ಆಫ್ ಲವ್

ಬೆಂಗಳೂರು: ನೈತಿಕ ಪೊಲೀಸ್ ಗಿರಿ ವಿರೋಧಿಸಿ ದಿ. ಪುಟ್ಟಣ್ಣ ಚೆಟ್ಟಿ ಪುರಭವನದ ಮುಂದೆ ಭಾನುವಾರ ನಡೆಯಲಿರುವ ಕಿಸ್ ಆಫ್ ಲವ್ ಆಚರಣೆಗೆ ಅವಕಾಶ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪುರಭವನದ ಮುಂದೆ ಆಚರಣೆ ನಡೆಸುವುದಾಗಿ ಆಯೋಜಕರು ಹೇಳಿದ್ದಾರೆ ಹೀಗಾಗಿ ಯಾವುದೇ ಕಾರಣಕ್ಕೂ ಕಿಸ್ ಡೇ ನಡೆಸಲು ಅನುಮತಿ ನೀಡಬಾರದು ಎಂದು ಅಬ್ರಹಾಂ ನಗರ ಪೊಲೀಸ್ ಆಯುಕ್ತ ಎಂ.ಎಸ್ ರೆಡ್ಡಿ ಅವರಿಗೂ ಪತ್ರ ಬರೆದಿದ್ದಾರೆ.

ಕಿಸ್ ಆಯೋಜಕರಿಗೆ ನಿರಾಕರಣೆ ಪತ್ರ ರವಾನೆ
ನಗರದಲ್ಲಿ ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ಇಲ್ಲ ಎಂಬ ಬಗ್ಗೆ ಸಂಬಂಧಪಟ್ಟ ಆಯೋಜಕರಿಗೆ ನಿರಾಕರಣೆ ಪತ್ರವನ್ನು ಕಳುಹಿಸಲಾಗಿದೆ ಹಾಗೂ ಸಂದೇಶವನ್ನೂ ರವಾನೆ ಮಾಡಲಾಗಿದೆ. ಆದರೂ ಅವರು ಕಾನೂನು ಮೀರಿದರೆ ಕ್ರಮ ಖಚಿತ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಚರಣೆಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಆಯೋಜಕರಿಗೆ ಪತ್ರ ತಲುಪಿದ ನಂತರ ಅವರು ಈ ಆಚರಣೆ ಮಾಡಿಯೇ ತೀರುತ್ತೇವೆ ಎಂದು ಮಾಧ್ಯಮದವರ ಬಳಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪೊಲೀಸರ ಬಳಿ ಅವರು ಮಾತುಕತೆ ನಡೆಸಿಲ್ಲ. ಹಾಗಾಗಿ ನಮಗೆ ಆ ಬಗ್ಗೆ ತಿಳಿದಿಲ್ಲ ಎಂದು ತಿಳಿಸಿದರು.

ಒಂದು ವೇಳೆ ಮತ್ತೆ ಅರ್ಜಿ ಸಲ್ಲಿಸಿದರೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ನಡುವೆ ಅವರು ಆಚರಣೆ ಮಾಡಿದ್ದೇ ಆದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಚೆಟ್ಟಿ ಕುಟುಂಬ ವಿರೋಧ
ಕಿಸ್ ಆಫ್ ಲವ್ ಕಾರ್ಯಕ್ರಮ ನಡೆಸುವುದಕ್ಕೆ ದಿ.ಪುಟ್ಟಣ್ಣ ಚೆಟ್ಟಿ ಕುಟಂಬ ಸದಸ್ಯರು ಹಾಗೂ ಭಾರತೀಯ ಕ್ರೈಸ್ತ ಒಕ್ಕೂಟ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಿಸ್ ಡೇ ನಡೆಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಪುರಭವನದ ಮುಂದೆ ನಡೆಸುವುದಾಗಿ ಆಯೋಜಕರು ಹೇಳಿದ್ದಾರೆ. ಇಂಥ ಕಾರ್ಯಕ್ರಮಗಳಿಂದ ಪುಟ್ಟಣ್ಣ ಚೆಟ್ಟಿ ಅವರ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಕುಟುಂಬ ಸದಸ್ಯರು ನಗರ ಪೊಲೀಸ್ ಆಯುಕ್ತ ಎಂ.ಎಸ್ ರೆಡ್ಡಿ ಅವರಿಗೆ ಮನವಿ ಪತ್ರ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com