
ಬೆಂಗಳೂರು: ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಯಾರ ಒತ್ತಡ ಕ್ಕೂ ಒಳಗಾಗದೇ ಪೊಲೀಸ್ ಇಲಾಖೆ ಮುಕ್ತವಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಸಾಮರಸ್ಯ ಕೆಡಿಸುವ, ಪ್ರಭಾವಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ನಗರದ ಕೋರಮಂಗಲ ಕೆಎಸ್‍ಆರ್‍ಪಿ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪೊಲೀಸ್ ಕೆಲಸ ಅತ್ಯಂತ ಸವಾಲಿನ ಕೆಲಸ. ಹಲವು ಸಂದರ್ಭಗಳಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸುತ್ತಾರೆ. ಜತೆಗೆ ಕಠಿಣ ಶ್ರಮ, ವೃತ್ತಿಪರತೆ, ಸಮಯಪ್ರಜ್ಞೆ ಮತ್ತು ಜನಪರ ನಿಲುವುಗಳ ಪರವಾಗಿ ಪೊಲೀಸರು ಕೆಲಸ ಮಾಡಬೇಕು. ಅಶಿಸ್ತಿಗೆ ಅವಕಾಶ ನೀಡಬಾರದು. ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನತೆ ನೆಮ್ಮದಿ, ಶಾಂತಿಯಿಂದ ಬದುಕುತ್ತಿದ್ದಾರೆ ಎನ್ನುವುದೇ ಪೊಲೀಸ್ ಇಲಾಖೆ ಅಳತೆಗೋಲು. ಪೊಲೀಸರ ಬಗ್ಗೆ ಜನರಲ್ಲಿ ಭಯದ ಬದಲು ಗೌರವ ಇರಬೇಕು. ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ, ದೌರ್ಜನ್ಯಕ್ಕೆ ಒಳಗಾದ ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸಿದರೆ ಜನರಲ್ಲಿ ಪೊಲೀಸರ ಬಗ್ಗೆ ಗೌರವ ಮೂಡುತ್ತದೆ ಎಂದರು.
ಗಣನೀಯ ಸೇವೆ ಪರಿಗಣಿಸಿ ಪೊಲೀಸರಿಗೆ ನೀಡುವ ಮುಖ್ಯಮಂತ್ರಿ ಪದಕ ಕೈ ಶಾಸಕರು ಹಾಗೂ ಅಧಿಕಾರಿಗಳಿಂದ ಒತ್ತಡದ ಶಿಫಾರಸು ಬಂದಿತ್ತು. ಅದ್ಯಾವುದಕ್ಕೂ ಮಣಿಯದೆ ವೃತ್ತಿನಿಷ್ಠೆ ಮತ್ತು ಜನಪರ ಧೋರಣೆ ಹೊಂದಿದ ಸಿಬ್ಬಂದಿಗೆ ಮಾತ್ರವೇ ದಕ ನೀಡಿ ಗೌರವಿಸಲಾಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಜತೆಗೆ ಮತ್ತಷ್ಟು ಆತ್ಮ ಸ್ಥೈರ್ಯ ತುಂಬಲು ಸಿಎಂ ಪದಕ ನೀಡಿ ಗೌರವಿಸುವ ಪರಿಪಾಠವಿದೆ. ಆದರೆ, ಕೆಲವರು ಶಾಸಕರು ಮತ್ತು ಅಧಿಕಾರಿಗಳ ಮೂಲಕ ಸಿಎಂ ಪದಕ ಪಟ್ಟಿಗೆ ಹೆಸರು ಸೇರಿಸುವಂತೆ ಶಿಫಾರಸು ಮಾಡಿಸಿದರು. ಯಾರ ಪ್ರಭಾವಕ್ಕೂ ಸೊಪ್ಪು ಹಾಕದೆ ಪ್ರಮಾಣಿಕ ಸಿಬ್ಬಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಶಿಫಾರಸಿನಂತೆ ಪದಕ ನೀಡಿದ್ದರೆ ಎಲ್ಲರಿಗೂ ನೀಡಬೇಕಾಗುತ್ತದೆ ಎಂದು ವ್ಯಂಗ್ಯ ಮಾಡಿದರು.
Advertisement