ಇಂದು ಬೆಂಗಳೂರು ಕರಗ

ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗ ಶುಕ್ರವಾರ ರಾತ್ರಿ ನಡೆಯಲಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗ ಶುಕ್ರವಾರ ರಾತ್ರಿ ನಡೆಯಲಿದೆ.

ಈ ಹಿನ್ನಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ರಾಜ್ಯ, ದೇಶ ಹಾಗೂ ವಿದೇಶಗಳಿಂದ ಅನೇಕ ಭಕ್ತರು ನಗರಕ್ಕೆ ಆಗಮಿಸಿದ್ದಾರೆ. ಧರ್ಮರಾಯಸ್ವಾಮಿ ದೇವಸ್ಥಾನ ಸೇರಿದಂತೆ ಆಸುಪಾಸಿನ ದೇವಸ್ಥಾನಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿವೆ.

ಇಂದು ಮಧ್ಯರಾತ್ರಿ 12ರ ವೇಳೆಗೆ ಕರಗ ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದಿಂದ ಹೊರಟು ಅಲಸೂರು ಆಂಜನೇಯ ಸ್ವಾಮಿ, ಶ್ರೀ ರಾಮ ದೇವಾಲಯ, ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ.

ವಿಶ್ವ ಪ್ರಸಿದ್ಧಿಯಾದ ಧರ್ಮರಾಯ ಸ್ವಾಮಿ-ದ್ರೌಪದಿ ದೇವಿ ಹೂವಿನ ಕರಗದ 11 ದಿನಗಳ ಉತ್ಸವ ಮಾರ್ಚ್‌ 26ರಂದು ಆರಂಭವಾಗಿದ್ದು,  ಏಪ್ರಿಲ್‌ 5ರ ವರೆಗೆ ಮುಂದುವರಿಯಲಿದೆ.

ಕರಗ ಶಕ್ತ್ಯೋತ್ಸವ ನಡೆಸಿಕೊಡುವ ಜ್ಞಾನೇಂದ್ರ ಅವರಿಗೆ ಅರಿಶಿನ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್ ಪಾರ್ಕ್‌ನ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ಮಾಡಲಾಗುವುದು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ನಂತರ ಮಧ್ಯರಾತ್ರಿ 12ರ ವೇಳೆಗೆ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಹೊರಡಲಿದೆ.
 
ತಿಗಳರ ಪೇಟೆಯ ಧರ್ಮರಾಯ ಸ್ವಾಮಿ-ದ್ರೌಪದಿ ದೇವಿ ಹೂವಿನ ಕರಗ ವಿಶ್ವ ಪ್ರಸಿದ್ಧಿ ಪಡೆದಿದ್ದು, ಇಂದು ರಾತ್ರಿ ಈ ಕರಗ ತಿಗಳರ ಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದಿಂದ ಹೊರಟು ಅಲಸೂರು ಆಂಜನೇಯ ಸ್ವಾಮಿ, ಶ್ರೀ ರಾಮ ದೇವಾಲಯ, ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಲಿದೆ.

ಈ ನಂತರ ಕರಗ ನಗರ್ತ ಪೇಟೆಯ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿ ಬೈರ ದೇವರ ದೇವಾಲಯ ಮಾರ್ಗವಾಗಿ ಕಬ್ಬನ್ ಪೇಟೆ 14ನೆ ಕ್ರಾಸ್ ರಾಮಸೇವಾ ಮಂದಿರ, 15ನೆ ಗಲ್ಲಿ ಆಂಜನೇಯ ಸ್ವಾಮಿ ದೇವಾಲಯ, ಮಕ್ಕಳ ಬಸವಣ್ಣ ಗುಡಿ, ಗಾಣಿಗರ ಪೇಟೆ ಚೆನ್ನರಾಯ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಈಶ್ವರ ದೇವಾಲಯದವರೆಗೆ ಆಗಮಿಸಲಿದೆ.

ಪ್ರತಿ ವರ್ಷದಂತೆ ಈಶ್ವರ ದೇವಾಲಯದಿಂದ ನಂತರ ಕೆ.ಆರ್.ಮಾರುಕಟ್ಟೆ ಉದ್ಭವ ಗಣಪತಿ ದೇವಾಲಯ, ಮುರಹರಿ ಸ್ವಾಮಿ ಮಠ, ಬೀರ ದೇವರ ಗುಡಿ, ಅರಳೇಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಮಸ್ತಾನ್ ಸಾಹೇಬರ ದರ್ಗಾದಿಂದ ಬಳೇಪೇಟೆ-ಬಳೇಗರಡಿ-ಅಣ್ಣಮ್ಮ ದೇವಾಲಯ , ಕಿಲಾರಿ ರಸ್ತೆ ಧರ್ಮರಾಯ ಸ್ವಾಮಿ ದೇವಾಲಯದಿಂದ ಪೂಜೆ ಸ್ವೀಕರಿಸಲಿದೆ.

ಇಲ್ಲಿ ಪೂಜೆ ಸ್ವೀಕರಿಸಿದ ನಂತರ ಮತ್ತೆ ಹೂವಿನ ಕರಗ ಯಲಹಂಕ ಗೇಟ್ ಆಂಜನೇಯ ಸ್ವಾಮಿ ದೇವಸ್ಥಾನ, ತುಪ್ಪದ ಆಂಜನೇಯ ಸ್ವಾಮಿ ಗುಡಿ, ರಂಗನಾಥ ಸ್ವಾಮಿ, ಚೌಡೇಶ್ವರಿ ಗುಡಿ, ಕುಂಬಾರ ಪೇಟೆ, ಗೊಲ್ಲರ ಪೇಟೆ, ತಿಗಳರ ಪೇಟೆಯ ಮನೆ ಮನೆಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಹಾಲು ಬೀದಿ , ಕಬ್ಬನ್ ಪಾರ್ಕ್ ಮೂಲಕ ಸುಣ್ಣಕಲ್ ಪೇಟೆಯಲ್ಲಿ ಸಂಚರಿಸಿ ಮುಂಜಾನೆ 6 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಲಿದೆ.

ಭಕ್ತಾದಿಗಳು ಈ ಹಿನ್ನೆಲೆಯಲ್ಲಿ ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ಕರಗದ ದರ್ಶನ ಪಡೆದು ರಸ್ತೆ ಸಂಚಾರಕ್ಕೆ ಯಾವುದೇ ಅಡೆ ತಡೆ ಉಂಟಾಗದಂತೆ ಸಹಕರಿಸಬೇಕೆಂದು ನಗರ ಪೊಲೀಸರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com