ಪ್ರೊ.ಭಗವಾನ್ ಸಾರ್ವಜನಿಕ ಚರ್ಚೆಗೆ ಬರಲಿ ಪೇಜಾವರ ಶ್ರೀ ಬಹಿರಂಗ ಸವಾಲು

ಶ್ರೀರಾಮ ಹಾಗೂ ಕೃಷ್ಣರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸವಾಲು ಹಾಕಿದ್ದಾರೆ...
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
Updated on

ಬೆಂಗಳೂರು: ಶ್ರೀರಾಮ ಹಾಗೂ ಕೃಷ್ಣರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸವಾಲು ಹಾಕಿದ್ದಾರೆ.

ರಾಮ ಎಂದಿಗೂ ಸ್ತ್ರೀ ಲೋಲನೂ ಆಗಿರಲಿಲ್ಲ, ಯಾವುದೇ ಜಾತಿ, ಜನಾಂಗದ ವಿರುದ್ಧ ದ್ವೇಷವನ್ನೂ ಸಾಧಿಸಿಲ್ಲ. ಹಾಗೆಯೇ ಭಗವದ್ಗೀತೆಯಲ್ಲಿ ಜಾತಿ ವ್ಯವಸ್ಥೆಗೆ ಕೃಷ್ಣ ನಾಂದಿ ಹಾಡಿದ್ದಾನೆ ಎನ್ನುವುದು ಮೂರ್ಖತನದ ಹೇಳಿಕೆ. ರಾಮಾಯಣ ಹಾಗೂ ಭಗವದ್ಗೀತೆ ಇರಿಸಿಕೊಂಡೇ ಚರ್ಚೆ ಮಾಡೋಣ, ಭಗವಾನ್ ಸೇರಿದಂತೆ ಇಂತಹ ವ್ಯಕ್ತಿಗಳು ಬಹಿರಂಗ ಚರ್ಚೆಗೆ ಬರಲಿ. ನಾನು ಪುರಾಣದ ದಾಖಲೆ ಸಮೇತ ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಘೋಷಿಸಿದರು.

ರಾಮಾಯಣ, ಮಹಾಭಾರತದಲ್ಲಿ ಯಾರನ್ನೂ ಜಾತಿ ವಿಚಾರದಲ್ಲಿ ಕೊಲ್ಲಲಾಗಿಲ್ಲ. ನೀತಿ ಕಾರಣಗಳಿಂದ ದುಷ್ಟರ ಸಂಹಾರವಾಗಿದೆ.  ಅದಕ್ಕೆ ಜಾತಿ ಲೇಪ ಮಾಡುವುದು ಅವರ ವ್ಯಕ್ತಿತ್ವ ತೋರಿಸುತ್ತದೆ. ಇನ್ನು ವರ್ಣಾಶ್ರಮ ವ್ಯವಸ್ಥೆಯು ಜಾತಿಯಾಧಾರಿತವಲ್ಲ, ಕರ್ಮ, ಗುಣದಿಂದ ವರ್ಣ ನಿರ್ಧಾರವಾಗುತ್ತದೆ. ಭಗವದ್ಗೀತೆಯಲ್ಲಿಯೂ ಇದು ಸ್ಪಷ್ಟ ವಾಗಿದೆ. ಮಧ್ವಾಚಾರ್ಯ ರೂ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಈ ಹಿನ್ನೆಲೆಯಲ್ಲಿ ರಾಮ, ಕೃಷ್ಣನ ಮೇಲೆ ಮಾಡಿರುವ ಆರೋಪಗಳು ಬೇಸರ ತರಿಸಿವೆ. ಇವರಿಗೆ ರಾಮ, ಕೃಷ್ಣ, ರಾಮಾಯಣ, ಭಗವದ್ಗೀತೆ ಏನೆಂಬುದನ್ನು ತೋರಿಸುತ್ತೇನೆ, ಚರ್ಚೆಗೆ ಬರಲಿ ಎಂದರು.

ಭೂ ಸ್ವಾಧೀನ ಕಾಯ್ದೆ ಪರಿಶೀಲಿಸಿ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ಸದಾಶಯದಿಂದಲೇ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರುತ್ತಿರಬಹುದು. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖೆ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಕಾಯಿದೆಯಲ್ಲಿನ ಅಂಶಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಈ ಸಂಬಂಧ ಪ್ರಧಾನಿಗೂ ಪತ್ರ ಬರೆದಿದ್ದೇನೆ ಹಾಗೂ ವೈಯಕ್ತಿಕವಾಗಿ ಚರ್ಚಿಸಿದ್ದೇನೆ. ಕೃಷಿ ಹಾಗೂ ಬಡವರಿಗೆ ಯಾವುದೇ ಸಮಸ್ಯೆಯಾಗದಂತೆ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯಲಿ ಎಂದು ಶ್ರೀಗಳು ಸಲಹೆ ನೀಡಿದರು.

ಇನ್ನು ಗಂಗಾ ಶುದ್ಧಿ ಯೋಜನೆ ಘೋಷಣೆಯಾಗಿದೆಯಷ್ಟೆ. ಯಾವುದೇ ಮಹತ್ವದ ಕೆಲಸಗಳು ಇನ್ನೂ ನಡೆದಿಲ್ಲ. ಇದಕ್ಕೆ ಇನ್ನಷ್ಟು ವೇಗ ನೀಡಿ ನದಿಯನ್ನು ಶುದ್ಧಗೊಳಿಸಬೇಕು. ಗಂಗಾ ನದಿಗೆ ಬರುತ್ತಿರುವ ಕಲುಷಿತಗಳನ್ನು ನಿಯಂತ್ರಿಸಬೇಕಿದೆ. ಹಾಗೆಯೇ ನದಿಯ ವೇಗಕ್ಕೆ ಯಾವುದೇ ತೊಂದರೆಯಾಗದಂತೆ ಶುದ್ಧೀಕರಣ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com