
ಬೆಂಗಳೂರು: ಜಮ್ಮು-ಕಾಶ್ಮೀರದ ಸರ್ಕಾರದಲ್ಲಿ ಬಿಜೆಪಿ ಪಾಲುದಾರಿಕೆ ಹೊಂದಿರುವುದೇ ಸರಿಯಾದ ನಿರ್ಧಾರ ಎಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷ ಸಮರ್ಥಿಸಿಕೊಂಡಿದೆ.
ಮುಖಂಡ ರಾಮ್ ಮಾಧವ್ ಅವರು ಜಮ್ಮು ಕಾಶ್ಮೀರ ಸರ್ಕಾರ ರಚನೆ ವಿವರವನ್ನು ಸಭೆಯ ಮುಂದಿಟ್ಟರು. ಸಾಮಾನ್ಯ ಕನಿಷ್ಠ ಕಾರ್ಯ ಕ್ರಮಗಳಡಿ ಅಭಿವೃದ್ಧಿಗೆ ಆದ್ಯತೆ ನೀಡಿ ಅಲ್ಲಿ ಸರ್ಕಾರ ರಚನೆ ಮಾಡಲಾಗಿದೆ. ಜಮ್ಮು ಭಾಗದಲ್ಲಿ ಬಿಜೆಪಿಯು ಅಧಿಕ ಸ್ಥಾನ ಪಡೆಯಿತು. ಕಣಿವೆ ಭಾಗದಲ್ಲಿ ಪಿಡಿಪಿ ಹೆಚ್ಚು ಸ್ಥಾನಗಳಿಸಿತು. ಉಳಿದ ಸ್ಥಾನ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಾಲಾದವು, ಪೂರ್ತಿ ಬಹುಮತ ಇದ್ದಿದ್ದರೆ ಯಾವುದೇ ಗೊಂದಲ ಗಳಿರುತ್ತಿರಲಿಲ್ಲ ಎಂದರು.
ಇಷ್ಟು ವರ್ಷ ಕಾಶ್ಮೀರ ಅಭಿವೃದ್ಧಿ ಕೇಂದ್ರಿತ ಹಣಮಾತ್ರ ಅಲ್ಲಿಗೆ ಹೋಗುತ್ತಿತ್ತು. ಈಗ ಜನಸಂಖ್ಯೆ ಆಧಾರಿತವಾಗಿ ಹಣ ವಿನಿಯೋಗವಾಗಿ ಜಮ್ಮು, ಕಾಶ್ಮೀರ ಲಡಾಕ್ ಪ್ರದೇಶ ಅಭಿವೃದ್ಧಿಯಾಗುತ್ತದೆ. 1947ರಲ್ಲಿ ಪಶ್ಚಿಮ ಪಾಕ್‍ನಿಂದ ನಿರಾಶ್ರಿತರಾಗಿ ಬಂದ 4 ಲಕ್ಷ ಜನರಿಗೆ ಈವರೆಗೆ ಪೌರತ್ವ ಕೊಟ್ಟಿಲ್ಲ, ಪಡಿತರ ಚೀಟಿ ಕೊಟ್ಟಿಲ್ಲ, ರಾಜ್ಯ ಸರ್ಕಾರದ ಯಾವುದೇ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ.
ಈಗ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಡಿ ಅವರಿಗೆ ಪೌರತ್ವ ನೀಡಲು ಪಿಡಿಪಿ ಒಪ್ಪಿದೆ. ಹೀಗಾಗಿ ಅವರೆಲ್ಲಾ ಉದ್ಯೋಗ ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ಎಲ್ಲಾ ಅವಕಾಶ ಕೊಟ್ಟಿರುವುದು ರಾಷ್ಟ್ರೀಯತೆ ತೋರಿಸುವ ಕೆಲಸವಾಗಿದೆ. ಅಭಿವೃದ್ಧಿ ಕೇಂದ್ರಿತವಾಗಿರುವ ಮತ್ತು ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮಾಡಿರುವ ಒಂದು ಪ್ರಯೋಗ ಎಂದು ವಿವರಿಸಿದರು. ವಿವಾದಾತ್ಮಕ ಆರ್ಟಿಕಲ್ 370 ಸೇರಿ ಇತರೆ ವಿಚಾರಗಳು ಸರ್ಕಾರದ ಅಜೆಂಡಾದಲ್ಲಿ ಇಲ್ಲ. ಅಭಿವೃದ್ಧಿ ಕೇಂದ್ರಿತ, ನಾಗರಿಕ ಸ್ನೇಹಿಯಾಗಿರುವ ಒಂದು ವ್ಯವಸ್ಥೆ ಇದೆ ಎಂದರು.
Advertisement