ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಏರ್ ಪೆಗಾಸಸ್ ಹಾರಾಟ

ಏರ್ ಪೆಗಾಸಸ್ ವಿಮಾನ
ಏರ್ ಪೆಗಾಸಸ್ ವಿಮಾನ

ಹುಬ್ಬಳ್ಳಿ: ವಿಮಾನಯಾನ ಸಂಸ್ಥೆ ಏರ್ ಪೆಗಾಸಸ್ ಬೆಂಗಳೂರು- ಹುಬ್ಬಳ್ಳಿ ನಡುವೆ ವೈಮಾನಿಕ ಹಾರಾಟ ಸೇವೆ ಆರಂಭಿಸಿದೆ.

ಭಾನುವಾರ ಸಂಸದ ಪ್ರಹ್ಲಾದ ಜೋಶಿ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಪ್ರಯಾಣಿಕರ ಅನುಕೂಲದ ಸಮಯಕ್ಕೆ ವಿಮಾನ ಹಾರಾಡಲಿದೆ. ಕೆಲ ದಿನಗಳವರೆಗೆ ಬೆಂಗಳೂರಿನಿಂದ
ಮಧ್ಯಾಹ್ನ 3.05ಕ್ಕೆ ಹೊರಟು 4.20ಕ್ಕೆ ಹುಬ್ಬಳ್ಳಿ ತಲುಪಲಿದೆ. ಪುನಃ ಹುಬ್ಬಳ್ಳಿಯಿಂದ 4.40ಕ್ಕೆ ನೆಗೆದು 5.55ಕ್ಕೆ ಬೆಂಗಳೂರು ತಲುಪಲಿದೆ. ಇಷ್ಟರಲ್ಲಿಯೇ ಮತ್ತೊಂದು ವೇಳಾಪಟ್ಟಿ ಪ್ರಕಟಿಸಲಾಗುವುದು.

ಸುಮಾರು ಆರು ತಿಂಗಳ ಕಾಲ 1, 2, 3, 4 ಎಂದು ಟಿಕೆಟ್‍ನಲ್ಲಿ ವರ್ಗೀಕರಣ ಮಾಡಲಾಗಿದ್ದು, ಕಡಿಮೆ ದರ ನಿಗದಿ ಮಾಡಲಾಗಿದೆ ಎಂದು ಏರ್ ಪೆಗಾಸಸ್‍ನ ವ್ಯವಸ್ಥಾಪಕ ನಿರ್ದೇಶಕ ಶೈಸನ್ ಥಾಮಸ್ ಸುದ್ದಿಗಾರರಿಗೆ ಹೇಳಿದರು. ಸಂಸ್ಥೆ ಎಟಿಆರ್-72 ಮೂರು ವಿಮಾನಗಳನ್ನು ಹೊಂದಿದ್ದು, ಇದೀಗ 66 ಸೀಟುಗಳ ಮತ್ತೆರಡು ಎಟಿಆರ್‍ಗಳು ಸೇರ್ಪಡೆಗೊಂಡಿವೆ.

ಬೆಂಗಳೂರು ಹೊರತುಪಡಿಸಿದರೆ ಹುಬ್ಬಳ್ಳಿಯಲ್ಲಿ ಸರ್ಕಾರಿ ಸೇರಿದಂತೆ ಖಾಸಗಿ ಕಚೇರಿಗಳಿವೆ. ಉತ್ತರ ಕರ್ನಾಟಕದ ವಾಣಿಜ್ಯ ನಗರಿಯಾಗಿ ಬೆಳೆದಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿದೆ. ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಾಕಷ್ಟು ಅವಕಾಶವಿರುವುದರಿಂದ ಸೇವೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ
ವಿಮಾನ ಸೇವೆ ಆರಂಭಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಬೆಂಗಳೂರಿನಿಂದ ಕೊಚ್ಚಿ, ಚೆನ್ನೈ, ತೂತುಕುಡಿ, ರಾಜಮಂಡ್ರಿ, ಪಾಂಡಿಚೇರಿ, ಮದುರೈ ಹಾಗೂ ವಾಸ್ಕೋಗೂ ಸೇವೆ ವಿಸ್ತರಿಸುವ ಚಿಂತನೆ ಇದೆ. ದಕ್ಷಿಣ ಭಾರತದಲ್ಲಿ ವಿಮಾನ ಸಂಪರ್ಕ ಸೇವೆ ಕೇವಲ ಶೇ. 4ರಷ್ಟಿದೆ. ಇದನ್ನು ಹೆಚ್ಚಿಸುವ ಜತೆಗೆ ಈ ಭಾಗದ ಪ್ರಾದೇಶಿಕ ಪ್ರದೇಶಗಳಿಗೂ ವಿಮಾನ ಸೇವೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com