
ಬೆಂಗಳೂರು: ಯಾರಿಗೂ ತೊಂದರೆಯಾಗದಂತೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಸಾರಕ್ಕಿ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಗುರುವಾರ ಹೇಳಿದ್ದಾರೆ.
ಕೆರೆ ಒತ್ತುವರಿ ಕಾರ್ಯಾಚರಣೆ ಕುರಿತು ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಂಕರ್, ತೆರವು ಕಾರ್ಯಾಚರಣೆಗಾಗಿ ವಾರದ ಹಿಂದೆಯೇ ಕ್ರಿಯಾ ಸಮಿತಿ ರಚಿಸಲಾಗಿತ್ತು ಮತ್ತು ಕಾರ್ಯಾಚರಣೆಗೆ ಬಿಎಂಟಿಎಫ್ ಮುಖ್ಯಸ್ಥ ಸುನಿಲ್‌ಕುಮಾರ್ ಅವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಹೈಕೋರ್ಟ್ ವಿಭಾಗಿಯ ಪೀಠದ ನಿರ್ದೇಶನದಂತೆ ಈ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ತೆರವಿಗೂ ಮೊದಲೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಸಾರ್ವಜನಿಕ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರವ ವಾಣಿಜ್ಯ ಕಟ್ಟಡ, ಮನೆ ಹಾಗೂ ಖಾಸಗಿ ಶಾಲೆ ಸೇರಿದಂತೆ ಎಲ್ಲ ರೀತಿಯ ಕಟ್ಟಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ನು ಎರಡು ಅಥವಾ ಮೂರು ದಿನ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಶಂಕರ್ ತಿಳಿಸಿದರು
ಸರ್ಕಾರಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಇದೆ. ದೇವಾಲಯಗಳನ್ನು ಬಿಡಬೇಡಿ ಎಂದು ಕೋರ್ಟ್ ಹೇಳಿದೆ. ಆದರೆ ಕೆಲವು ಸೂಕ್ಷ್ಮ ವಿಚಾರಗಳ ಕುರಿತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಾರಕ್ಕಿ ಕೆರೆಯಲ್ಲೂ ದೇವಾಲಯಗಳು ಹಾಗೂ ಚರ್ಚ್‌ಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ನೀಡಲಾಗುವುದು ಎಂದರು.
ಸಾರಕ್ಕಿ ಕೆರೆ ಒಟ್ಟು 82 ಎಕರೆ, 24 ಗುಂಟೆ ಇದ್ದು, ಈ ಪೈಕಿ ಸುಮಾರು 30 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಮತ್ತು ಕೆಲವು ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಮತ್ತು ಬಡಾವಣೆ ನಿರ್ಮಿಸಿ ಸೈಟ್ ಮಾರಾಟ ಮಾಡಿರುವವರ ವಿರುದ್ಧ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಿಎಂಟಿಎಫ್‌ಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ನಿನ್ನೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇಟ್ಟಮಡು ಕರೆಯಲ್ಲಿ 6.23 ಎಕರೆ ಒತ್ತುವರಿಯನ್ನು ಬುಧವಾರ ತೆರವುಗೊಳಿಸಲಾಗಿದೆ. ಇನ್ನು ಚಿಕ್ಕಲಸಂದ್ರದಲ್ಲಿ ಸ.ನಂ.83ರಲ್ಲಿ 6.23 ಎಕರೆ ಹಾಗೂ ಇಟ್ಟುಮಡುವಿನ ಸ.ನಂ.17ರಲ್ಲಿ 4 ಎಕರೆ ಸೇರಿದಂತೆ ಒಟ್ಟು 10.23 ಎಕರೆ ತೆರವುಗೊಳಿಸಲಾಗಿದೆ.
Advertisement