
ಮೈಸೂರು: ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರಿಗೆ 2014ನೇ ಸಾಲಿನ `ಬಸವ ರಾಷ್ಟ್ರೀಯ ಪುರಸ್ಕಾರ'ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಸಂಯುಕ್ತವಾಗಿ ನಗರದ ಕಲಾಮಂದಿರಯಲ್ಲಿ ಆಯೋ ಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ನಿಡುಮಾಮಿಡಿ ಶ್ರೀಗಳಿಗೆ ಶಾಲು ಹೊದಿಸಿ, ಫಲತಾಂಬೂಲ,ಪ್ರಶಸ್ತಿ ಫಲಕ ಹಾಗೂ ರು. ೧೦ ಲಕ್ಷ ಚೆಕ್ ನೀಡಿ ಗೌರವಿಸಿದರು. ಸ್ವಾಮೀಜಿಗಳಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಂತೆ ಮೇಲಿನಿಂದ ಪುಷ್ಪಾರ್ಚನೆ ಸಹ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಈ ಪ್ರಶಸ್ತಿಗೆ ಪಾತ್ರರಾಗಬೇಕಾದ ಅನೇಕ ಹಿರಿಯರು ನಾಡಿನಲ್ಲಿ ಇದ್ದಾರೆ. ಪ್ರಶಸ್ತಿ ಆಯ್ಕೆ ಎಲ್ಲ ಪ್ರಕ್ರಿಏ ಮುಗಿದ ಮೇಲೆ ವಿಷಯ ತಿಳಿದು ಬಂದಿದ್ದರಿಂದ ಆಯ್ಕೆ ಸಮಿತಿ ನಿರ್ಧಾರವನ್ನು ಮೀರಲು, ತಿರಸ್ಕರಿಸಲು ಆಗಲಿಲ್ಲ. ಇಡೀ ಕರ್ನಾಟಕ ಜನಪರ, ಪ್ರಗತಿಪರ, ಎಲ್ಲ ಹೋರಾಟಗಾರರನ್ನು ನೆನಪು ಮಾಡಿಕೊಳ್ಳುತ್ತ, ಪ್ರಗತಿಪರ ಮಠಾಧೀಶರ ವೇದಿಕೆಯ ಸಮಾಜ ಪರಿವರ್ತನೆಯ ಸದಾಶಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಿದ್ದಾರೆಂಬ
ಭಾವದಿಂದ ಸ್ವೀಕರಿಸಿದ್ದೇನೆ ಎಂದರು.
ನನಗೆ ಅನೇಕ ಬಾರಿ ಪ್ರಾಣ ಬೆದರಿಕೆ ಬಂದಿದೆ. ಸಾವಿನ ಬಾಯಿಗೆ ಹೋಗಿ ಬಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಾಡಿನ ಶೋಷಿತ ವರ್ಗದ ಜನ ನನ್ನ ಪರವಾಗಿ ನಿಂತು ಪ್ರೀತಿ ತೋರಿ ಧೈರ್ಯ ತುಂಬಿದನ್ನು ಎಂದೂ ಮರೆಯುವುದಿಲ್ಲ. ಅದೇ ರೀತಿ ನನ್ನನ್ನು ವಿರೋಧಿಸಿದವರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಅವರುತಿಳಿಸಿದರು.
Advertisement