ಮೇ 15ರೊಳಗಾಗಿ ಅಕ್ರಮ ಸಂಪರ್ಕ ಸಕ್ರಮ ಮಾಡ್ಕೊಳ್ಳಿ

ಅನಧಿಕೃತ ಪಂಪ್‍ಸೆಟ್‍ಗಳನ್ನು ಮೇ 15ರೊಳಗೆ ಸಕ್ರಮಗೊಳಿಸಿಕೊಳ್ಳದಿದ್ದರೆ, ನಿರ್ದಾಕ್ಷಿಣ್ಯವಾಗಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ...
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
Updated on

ಬೆಂಗಳೂರು: ಅನಧಿಕೃತ ಪಂಪ್‍ಸೆಟ್‍ಗಳನ್ನು ಮೇ 15ರೊಳಗೆ ಸಕ್ರಮಗೊಳಿಸಿಕೊಳ್ಳದಿದ್ದರೆ, ನಿರ್ದಾಕ್ಷಿಣ್ಯವಾಗಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಸಂಪರ್ಕ ಪಡೆದ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಲು ಮಾ.30ರವರೆಗೆ ಗಡುವು ನೀಡಲಾಗಿತ್ತು. ಆದರೆ ರೈತರ ಬೇಡಿಕೆ ಹಾಗೂ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸಮಯ ವಿಸ್ತರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ. ಮತ್ತೆ ಸಮಯ ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಅಕ್ರಮ ಸಂಪರ್ಕ ಹೊಂದಿರುವವರು ಪ್ರಸರಣ ಇಲಾಖೆ ನಿಗದಿಪಡಿಸಿರುವ ಠೇವಣಿ ಕಟ್ಟಿ ಸಕ್ರಮಗೊಳಿಸಿಕೊಳ್ಳಬೇಕು. ರಾಜ್ಯದಲ್ಲಿ 2 ರಿಂದ 3 ಲಕ್ಷ ಇಂಥ ಸಂಪರ್ಕಗಳಿದ್ದು, ಈಗಾಗಲೇ ಒಂದು ಲಕ್ಷ ರೈತರು ತಮ್ಮ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಿಕೊಂಡಿದ್ದಾರೆ. ಇಂಧನ ಇಲಾಖೆಗೆ ಅಕ್ರಮ ಪಂಪ್‍ಸೆಟ್‍ಗಳ ಬಗ್ಗೆ ಮÁಹಿತಿ ಸಿಗದಿದ್ದರೆ ಸರ್ಕಾರ ನೀಡುವ ಸಹಾಯಧನ ವ್ಯರ್ಥವಾಗುತ್ತದೆ ಎಂದರು.

ರೇಸಿಂಗ್ ಟ್ರ್ಯಾಕ್ ಶೀಘ್ರ: ಅಮೆರಿಕ ಮೂಲದ ಆ್ಯಕ್ಷನ್ ಮೋಟಾರ್ಸ್ ಸ್ಪೋರ್ಟ್ಸ್ ಸಂಸ್ಥೆ 250 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮೈಸೂರು, ಬೆಂಗಳೂರು ವಲಯ ಇಲ್ಲವೆ ರಾಮನಗರದಲ್ಲಿ ರೇಸಿಂಗ್ ರ್ಟ್ಯಾಕ್ ನಿರ್ಮಾಣ ಮಾಡಲು ಮುಂದೆ ಬಂದಿದೆ. ಮೋಟಾರ್ ಸಂಸ್ಥೆಗೆ ಅಗತ್ಯವಿರುವ 300 ಎಕರೆ ಜಮೀನು ನೀಡಿದಲ್ಲಿ, ತಕ್ಷಣವೇ ರೇಸಿಂಗ್ ಟ್ರ್ಯಾಕ್ ನಿರ್ಮಾಣ ಆರಂಭಗೊಳ್ಳುತ್ತದೆ. ಯೋಜನೆ ಅನುಷ್ಠಾನಗೊಂಡರೆ, ಸ್ಥಳೀಯರಿಗೆ ಮೂರು ಸಾವಿರ ಉದ್ಯೋಗ ಲಭ್ಯವಾಗಲಿದೆ. ಸರ್ಕಾರವೇ ಅವರಿಗೆ ಭೂಮಿ ನೀಡುತ್ತದೆ. ಇಲ್ಲವಾದರೆ ಖಾಸಗಿಯವರಿಂದ ಭೂಮಿ ಖರೀದಿಸುವ ಬಗ್ಗೆ ಸಂಸ್ಥೆ ಚಿಂತನೆ ನಡೆಸಿದೆ ಎಂದರು.

ನೊಯ್ಡಾದಲ್ಲಿರುವ ಫಾರ್ಮುಲಾ-1 ರೇಸಿಂಗ್ ಟ್ರ್ಯಾಕ್ ಮಾದರಿಯಲ್ಲೇ ಏಷ್ಯಾಖಂಡವನ್ನು ಕೇಂದ್ರವಾಗಿರಿಸಿಕೊಂಡು ನಿರ್ಮಾಣ ಮಾಡಲು ಅಮೆರಿಕ ಕಂಪನಿ ಮುಂದೆ ಬಂದಿದೆ. ರೇಸ್ ಕಾರುಗಳ ತಯಾರಿಕೆ, ಸರ್ವಿಸಿಂಗ್ ಹಾಗೂ ನಿರ್ವಹಣೆ ಘಟಕ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಫುಟ್ಬಾಲ್ ಕ್ರೀಡಾಂಗಣವನ್ನೂ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಪ್ರವಾಸೋದ್ಯಮ ಹಾಗೂ ಮೂಲ ಸೌಕರ್ಯ ಇಲಾಖೆ ಜೊತೆ ಚರ್ಚಿಸಿ, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಲ್ಲರೂ ಮಾಜಿ ಆಗಲೇಬೇಕು: ಎಚ್‍ಡಿಕೆಗೆ ತಿರುಗೇಟು ರಾಜಕಾರಣದಲ್ಲಿ ಎಲ್ಲರೂ ಒಂದು ದಿನ ಮಾಜಿ ಆಗಲೇಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಯಾರಿಗೂ ಮುಹೂರ್ತ ಫಿಕ್ಸ್ ಮಾಡುವಷ್ಟು ದೊಡ್ಡವನಲ್ಲ. ನಾನು 30ನೇ ವರ್ಷಕ್ಕೇ ಸಚಿವನಾಗಿ ಮಾಜಿಯಾಗಿದ್ದೇನೆ. ರಾಜಕಾರಣದಲ್ಲಿ ನನಗೆ ಎಲ್ಲ ರೀತಿಯ ಅನುಭವಗಳೂ ಆಗಿವೆ ಎಂದು ಹೇಳಿದರು. ಸಚಿವ ಹುದ್ದೆ ಸೇರಿದಂತೆ ಯಾವುದೂ ಶಾಶ್ವತವಲ್ಲ ಎಂಬುದು ನನಗೆ ತಿಳಿದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುಂಬಾ ದೊಡ್ಡವರು. ಅವರ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ನಾನೇಕೆ ಅವರ ಟೈಮು ಫಿಕ್ಸು ಮಾಡಲಿ. ಅದು ನನ್ನ ಕೆಲಸವಲ್ಲ. ಕೆಟ್ಟದು, ಒಳ್ಳೆಯದನ್ನು ದೇವರು ನೋಡಿಕೊಳ್ಳುತ್ತಾನೆ. ಆ ಕುರಿತು ನಾನೇನೂ ಹೇಳಲಾರೆ. ಸಮಯ ಬಂದಾಗ ಅವರ ಎಲ್ಲಾ ಆರೋಪಗಳಿಗೆ ಉತ್ತರ ನೀಡುವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com