ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ: ರಾಜ್ಯದಿಂದ ತೀವ್ರ ಆಕ್ಷೇಪ

ಮೇಕೆದಾಟು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಜಲಾಶಯ ನಿರ್ಮಿಸದಂತೆ ಕರ್ನಾಟಕಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ತಮಿಳುನಾಡು ಸಿಎಂ...
ಅನಂತ್ ಕುಮಾರ್
ಅನಂತ್ ಕುಮಾರ್

ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಜಲಾಶಯ ನಿರ್ಮಿಸದಂತೆ ಕರ್ನಾಟಕಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಅವರು ಪ್ರಧಾನಿಗೆ ಬರೆದಿರುವ ಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ತಮಿಳುನಾಡಿನಲ್ಲಿ ಚುನಾವಣೆ ಬರುತ್ತಿದೆ. ಈ ಕಾರಣಕ್ಕೆ ಜಯಲಲಿತಾ ಮತ್ತು ಅಲ್ಲಿನ ಮುಖ್ಯಮಂತ್ರಿ ಈ ವಿಷಯ ಎತ್ತಿದ್ದಾರೆ.  ವಾಸ್ತವವಾಗಿ ಇದು ವಿವಾದದ ವಿಷಯವೇ ಅಲ್ಲ.  ಮೇಕೆದಾಟು ಇರುವುದು ಕರ್ನಾಟಕದಲ್ಲಿ. ಜಲಾಶಯ ನಿರ್ಮಾಣ ಮಾಡುವ ಎಲ್ಲಾ ಹಕ್ಕು ಕರ್ನಾಟಕಕ್ಕಿದೆ ಎಂದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಮಿಳುನಾಡಿನ ಸಂಸದರು ಲೋಕಸಭೆಯಲ್ಲೂ ಈ ವಿಷಯ ಎತ್ತಲು ಪ್ರಯತ್ನಿಸಿದರು. ಆದರೆ ನಾನೊಬ್ಬ ಕೇಂದ್ರ ಮಂತ್ರಿಯಾಗಿದ್ದರೂ ನಾಡಿನ ಹಿತರಕ್ಷಣೆಗೆ ಮುಂದಾಗಿ  ವಸ್ತುಸ್ಥಿತಿ ತಿಳಿಸುವ ಪ್ರಯತ್ನ ಮಾಡಿದೆ. ಪಕ್ಷಾತೀತವಾಗಿ ರಾಜ್ಯದ ಎಲ್ಲಾ ಸಂಸದರು ದನಿಗೂಡಿಸಿದರು ಎಂದರು.
ಉತ್ತರ ಕೊಟ್ಟಿದ್ದೇವೆ-ಸಚಿವ ಎಂ.ಬಿ ಪಾಟೀಲ್:  ಮೇಕೆದಾಟು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಲ ಸಂಪನ್ಮೂಲ ಸಚಿವ ಎಂ.ಬಿಪಾಟೀಲ್, ಮೇಕೆದಾಟು ವಿಚಾರವಾಗಿ ತಮಿಳುನಾಡಿನವರು ನವೆಂಬರ್ ನಲ್ಲಿ  ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ. ನಮಗೂ ಪತ್ರ ಬರೆದಿದ್ದರು. ನಾವು  ಸುದೀರ್ಘ ಉತ್ತರ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಕಾರ್ಯಗತಕ್ಕೆ ಮೊದಲು ಸಮಗ್ರ ಯೋಜನಾ ವರದಿ ಸಿದ್ದವಾಗಬೇಕಿದೆ. ಇದು ಸಿದ್ದವಾಗದೇ ಕೇಂದ್ರಕ್ಕೆ ಪ್ರಸ್ತಾವನೆ ಮಾಡಲು ಸಾಧ್ಯವಿಲ್ಲ. ಸದ್ಯ ಎಕ್ಸ್ ಪ್ರೆಶನ್ ಆಫ್ ಇಂಟರೆಸ್ಟ್ ಕರೆದಿದ್ದು, ಐದು ಕಂಪನಿಗಳು ಮುಂದೆ ಬಂದಿದ್ದು, ಈ ಪೈಕಿ ಮೂರು ಕಂಪನಿಗಳ ಶಾರ್ಟ್ ಲಿಸ್ಟ್ ಗೊಳಿಸಲಾಗಿದೆ. ಅಂತಿಮವಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ಡಿಪಿಆರ್ ಗೆ ಆದೇಶಿಸಲಾಗುತ್ತದೆ ಎಂದರು.  ಡಿಪಿಆರ್ ಸಿದ್ಧಗೊಳ್ಳಲು 3ರಿಂದ ನಾಲ್ಕು ತಿಂಗಳು ಬೇಕಾಗಬಹುದು. ಇದಾದ ನಂತರ ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ  ಪ್ರಾಧಿಕಾರಗಳಿಗೆ ಪ್ರಸ್ತಾವನೆ ಕಳುಹಿಸುತ್ತೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com