
ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ನಂತರ ಸಂಪುಟ ಪುನರ್ ರಚನೆ ಆಗಲಿದೆ. ಯಾರನ್ನು ಕೈ ಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ನನ್ನ ನಡುವೆ ಶೀತಲ ಸಮರವಿದೆ ಎಂದು ವದಂತಿ ಹಬ್ಬಿದ್ದು, ಅವು ಯಾವುವೂ ನಿಜವಲ್ಲ. ನಿಗಮ ಮಂಡಳಿಗಳಿಗೆ ಶೀಘ್ರವೇ ನೇಮಿಸಲಾಗುವುದು ಎಂದವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ 13ಕ್ಕೆ ಎರಡು ವರ್ಷಗಳಾಗಿವೆ. ಪ್ರಣಾಳಿಕೆಯಲ್ಲಿ ಘೋಷಿಸಿದ ಸಾಕಷ್ಟು ಭರವಸೆಗಳನ್ನು ಈಡೇರಿಸಿದೆ. ಈ ಸಂಗತಿಯನ್ನು ಜನರಿಗೆ ತಿಳಿಸಲು ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಮಾವೇಶ ನಡೆಸುವ ಚಿಂತನೆ ಇದೆ. ದಿನಾಂಕ ಮತ್ತು ಸ್ಥಳವನ್ನು ಶೀಘ್ರವೇ ನಿಗದಿ ಮಾಡಲಾಗುವುದು. ಒಂದು ವೇಳೆ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದರೂ ಪಕ್ಷದ ವತಿಯಿಂದ ಸಮಾವೇಶ ನಡೆಸಲಾಗುತ್ತದೆ ಎಂದರು.
ಶೀಘ್ರವೇ ನಡಹಳ್ಳಿ ಭೇಟಿ: ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರನ್ನು ಈಗಾಗಲೇ ಶಾಸಕಾಂಗ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವ ಕುರಿತು ಹೈ ಕಮಾಂಡ್ ಸಲಹೆ ಪಡೆಯಲಾಗುತ್ತಿದೆ. ನಡಹಳ್ಳಿ ಅವರ ಅಮಾನತ್ತಿನ ಹಿಂದೆ ಯಾವುದೇ ಆತುರದ ನಿರ್ಧಾರವಿಲ್ಲ. ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಅವರು ನನ್ನನ್ನು ಭೇಟಿ ಮಾಡಲು ಯತ್ನಿಸಿದ್ದು, ಶೀಘ್ರವೇ ಭೇಟಿಯಾಗುತ್ತೇನೆ ಎಂದರು.
ನಡಹಳ್ಳಿಯವರಿಗೆ ಪಕ್ಷದಿಂದ ನೋಟೀಸ್ ನೀಡಲಾಗಿತ್ತು. ಅವರು ಉತ್ತರ ನೀಡಿದ್ದು, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥ್ರೈಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಪಕ್ಷದ ಸಲಹೆ ಕೇಳಿ ಈಗ ಅಮಾನತು ಮಾಡಿದ್ದಾರೆ. ಉಚ್ಚಾಟನೆ ಅಥವಾ ಶಾಸಕಾಂಗದಿಂದ ಅನರ್ಹಗೊಳಿಸುವ ಕುರಿತು ಹೈ ಕಮಾಂಡ್ ಅಭಿಪ್ರಾಯ ಪಡೆಯಲಾಗುವುದು ಎಂದರು. ನೇಪಾಳ ಸಂತ್ರಸ್ತರ ನೆರವಿಗೆ ತಮ್ಮ ಒಂದು ವರ್ಷದ ಶಾಸಕ ವೇತನ ನೀಡುತ್ತಿರುವುದಾಗಿ ಇದೇ ವೇಳೆ ತಿಳಿಸಿದರು.
Advertisement