
ಬೆಂಗಳೂರು: ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನ ಜತೆ ವಿವಾಹವಾಗುತ್ತಿರುವುದಕ್ಕೆ ಬೇಸರಗೊಂಡ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರ ಸಮೀಪದ ಕೂಡ್ಲಗೇಟ್ ನಿವಾಸಿ ಸ್ವಾಮಿ(27) ಮೃತ ಯುವಕ.
ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದ ಸ್ವಾಮಿ 8 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ.
ಐದು ವರ್ಷಗಳ ಹಿಂದೆ ಕಡೂರು ಸಮೀಪದ ಬಸವಪುರದ ಯುವತಿಯೊಬ್ಬಳ ಪರಿಚಯವಾಗಿತ್ತು. ಇಬ್ಬರ ಸ್ನೇಹಿತರಾಗಿದ್ದು ಬಳಿಕ ಪ್ರೀತಿ ಬೆಳೆದಿತ್ತು.
ನಂತರ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ, ವೈಯಕ್ತಿಕ ವಿಚಾರವಾಗಿ ಮೂರು ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿದ್ದು, ಸ್ವಾಮಿಯಿಂದ ದೂರವಾದ ಯುವತಿ ಹುಟ್ಟೂರಿಗೆ ತೆರಳಿದ್ದಳು. ಆಕೆಯ ಪಾಲಕರು ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ತಿಳಿದ ಸ್ವಾಮಿ, ಏ.25ರಂದು ಯುವತಿಯ ಮನೆಗೆ ತೆರಳಿ ವಾಪಸ್ ಬೆಂಗಳೂರಿಗೆ ಬರುವಂತೆ ಮನವೊಲಿಸುವುದಕ್ಕೆ ಯತ್ನಿಸಿದ್ದ.
ಇದಕ್ಕೆ ಯುವತಿ ಒಪ್ಪದೆ ಇದ್ದಾಗ ಬೆಂಗಳೂರಿಗೆ ಬಂದ ಸ್ವಾಮಿ ಮಾನಸಿಕವಾಗಿ ನೊಂದಿದ್ದ. ಸೋಮವಾರ ತಾನು ಸ್ನೇಹಿತರೆಲ್ಲರು ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
Advertisement