
ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಬದಲಾವಣೆ ಮಾಡಲಾಗಿದ್ದು, ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ವಹಿಸಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಶನಿವಾರ ಹೊರಬಿದ್ದಿದೆ.
ಇಲ್ಲಿವರೆಗೆ ಬೃಹತ್ ಕೈಗಾರಿಕೆ ಖಾತೆ ಮುಖ್ಯಮಂತ್ರಿಯವರ ಬಳಿ ಇತ್ತು. ಈಗ ಖಾತೆ ಬದಲಾವಣೆ ಮಾಡಿರುವ ಸಿಎಂ, ಉನ್ನತ ಶಿಕ್ಷಣ ಖಾತೆಯನ್ನು ತಾವು ಇಟ್ಟುಕೊಂಡು ಬೃಹತ್ ಕೈಗಾರಿಕಾ ಖಾತೆಯನ್ನು ದೇಶಪಾಂಡೆಯವರಿಗೆ ಹೆಗಲಿಗೆ ಏರಿಸಿದ್ದಾರೆ. ಇದಕ್ಕೆ ಕಾರಣ ಮುಂದಿನ ನವೆಂಬರ್‍ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ.
ಅದಕ್ಕಾಗಿ ಈಗಾಗಲೇ ನಿರಂತರ ಸಭೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯ ಕಾರ್ಯ ಭಾರದೊಂದಿಗೆ ಈ ಸಭೆಗಳಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಬಿಬಿಎಂಪಿ ಚುನಾವಣೆಗೆ ಎದುರಿಗಿರುವ ಕಾರಣ ಖಾತೆಯನ್ನು ಬದಲಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲದೇ, ಆರ್.ವಿ. ದೇಶಪಾಂಡೆಯವರು 10 ವರ್ಷ ಕಾಲ ಕೈಗಾರಿಕೆ ಖಾತೆ ಜವಾಬ್ದಾರಿ ಹೊತ್ತಿದ್ದಲ್ಲದೇ, ಹಿಂದೊಮ್ಮೆ ಇದೇ ರೀತಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದರು. ಈ ಕಾರಣಕ್ಕೆ ಅವರೇ ಈ ಖಾತೆಗೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಖಾತೆ ಬದಲಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
Advertisement