
ಬೆಂಗಳೂರು: `ಜ್ಞಾನವೇ ಇಲ್ಲದೆ ಯಜ್ಞ, ಯಾಗ ಸಂಪ್ರದಾಯಗಳಿಗೆ ಸೀಮಿತವಾಗಿದ್ದ ಹಿಂದೂ ಧರ್ಮಕ್ಕೆ ಜ್ಞಾನ ತಂದುಕೊಟ್ಟಿದ್ದೇ ಬೌದ್ದ ಧರ್ಮ' ಎಂದು ಲೇಖಕ ಪ್ರೊ.ಕೆ. ಎಸ್.ಭಗವಾನ್ ಅಭಿಪ್ರಾಯಪಟ್ಟರು. ಜೈ ಭೀಮ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಬೌದ್ಧ ಸಮಾಜ ಸಂಘಟನೆಯ ಉದ್ಘಾಟನೆ ಹಾಗೂ ಬೌದ್ಧ ಧರ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಜನರಿಗೆ ಜ್ಞಾನವೇ ಇರಲಿಲ್ಲ. ಕೇವಲ ಯಜ್ಞ, ಯಾಗದಂತಹ ಮೂಢನಂಬಿಕೆ ಪ್ರತಿಪಾದಿಸಿಕೊಂಡು ಹಿಂದೂ ಧರ್ಮ ನಡೆಯುತ್ತಿತ್ತು. ನಂತರ ಬಂದ ಬುದ್ಧ ತನ್ನ ತತ್ವಗಳ ಮೂಲಕ ಹಿಂದೂ ಧರ್ಮಕ್ಕೆ ಜ್ಞಾನ ನೀಡಿದ. ಇಂದಿಗೂ ಹಿಂದೂ ಧರ್ಮದಲ್ಲಿರುವ ಜ್ಞಾನ, ಸಂದೇಶಗಳೆಲ್ಲವೂ ಬೌದ್ಧ ಧರ್ಮದಿಂದ ಬಂದ ಕೊಡುಗೆಗಳಾಗಿವೆ. ದೇಶದಲ್ಲಿ ಬೌದ್ಧ ಧರ್ಮದಿಂದ ಪ್ರಭಾವಿತರಾದ ಜನರು ಬೌದ್ಧ ಧರ್ಮ ಸ್ವೀಕರಿಸಿದರು. ರಾಜರು ಕೂಡ ಬೌದ್ಧ ಧರ್ಮ ಸ್ಥಾಪಿಸಿ ಆಡಳಿತ ನಡೆಸಿದರು. ಆದರೆ ವೈದಿಕಶಾಹಿಗಳು ಬೌದ್ಧ ಧರ್ಮ ಪಾಲಿಸುತ್ತಿದ್ದ ರಾಜರನ್ನು ನಾಶ ಮಾಡಲು ಹೊರಗಿನಿಂದ ದಾಳಿಕೋರರನ್ನು ಕರೆಸಿ ಸಂಚು ಹೂಡಿದರು. ಹೀಗಾಗಿ ದೇಶದ ಮೇಲೆ ಪರಕೀಯರಿಂದ 26 ಬಾರಿ ದಾಳಿಯಾಯಿತು ಎಂದು ವಿವರಿಸಿದರು.
ದೇಶದ ಪ್ರಜೆಗಳಲ್ಲಿ ಮೂರನೇ ಒಂದರಷ್ಟು ಮಂದಿ ಬೌದ್ಧ ಧರ್ಮಕ್ಕೆ ಸೇರಿದ್ದಾರೆ. ಸ್ವಾಮಿ ವಿವೇಕಾನಂದರು ವಿದೇಶಗಳಲ್ಲಿ ಮಾಡಿದ ಭಾಷಣಗಳಲ್ಲಿ ಇದನ್ನೇ ಪ್ರತಿಪಾದಿಸಿದ್ದರು. ಶಾಲಾ ನಕಾಲೇಜುಗಳ ಪಠ್ಯಗಳಲ್ಲಿ ನೀಡಿರುವ ಇತಿಹಾಸ ದೊಡ್ಡ ಸುಳ್ಳು. ದೇಶದಲ್ಲಿ ಬೌದ್ಧ
ಧರ್ಮಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಇತಿಹಾಸದಿಂದ ಆರಂಭವಾಗಿ ಇಲ್ಲಿಯವರೆಗೆ ಹಿಂದೂ ಧರ್ಮದ ಜನರೇ ಹೆಚ್ಚಿದ್ದಾರೆ ಎಂದು ಹೇಳಲಾಗಿದೆ. ನಿಜವಾದ ಇತಿಹಾಸವನ್ನು ಮರೆಮಾಚಿದ್ದು, ಶಾಲೆಗಳ ಪುಸ್ತಕಗಳಲ್ಲಿ ಸುಳ್ಳು ಇತಿಹಾಸ ನೀಡಲಾಗಿದೆ. ಇಸ್ಲಾಂ,ಕೈಸ್ತ ಹಾಗೂ ಬೌದ್ಧ ಧರ್ಮಗಳು ವಿಶ್ವಧರ್ಮಗಳಾಗಿದ್ದು, ಇವುಗಳಲ್ಲಿ ಮೂಲಭೂತವಾದ ಪ್ರತಿಪಾದಿಸದಿರುವುದು ಬೌದ್ಧಧರ್ಮ ಮಾತ್ರ. ಎಲ್ಲ ಧರ್ಮಗಳು `ನಾವು ಹೇಳಿದ್ದೇ ಸರಿ' ಎನ್ನುವ ಮೂಲಭೂತವಾದ ಪ್ರತಿಪಾದಿಸುತ್ತವೆ. ಆದರೆ ಬೌದ್ಧ ಧರ್ಮ ಸತ್ಯ ಎಂದು ತಿಳಿದಿದ್ದನ್ನು ಮಾತ್ರ ಅನುಸರಿಸಿ ಎಂದು ಹೇಳುತ್ತದೆ ಎಂದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಬಲಿ ನೀಡುವುದು, ಯಜ್ಞ ಯಾಗಾದಿ ಮಾಡುವುದು ದೇವರ ಪೂಜೆ ಎನ್ನಿಸಿಕೊಳ್ಳುವುದಿಲ್ಲ. ಆದರೆ ಧ್ಯಾನ ಮಾಡುವುದು ನಿಜವಾದ ಪೂಜೆ. ಬೌದ್ಧ ಧರ್ಮ ಬಲಿ, ಯಜ್ಞಗಳಂತಹ ಆಚರಣೆ ಬಿಟ್ಟು ಧ್ಯಾನ ಮಾಡುವಂತೆ ಪ್ರೇರಣೆ ನೀಡುತ್ತದೆ. ಜಾತೀಯತೆಯ ಸಮಸ್ಯೆಯಿಂದ ಸಮಾಜವನ್ನು ಹೊರತರಲು ಎಲ್ಲರೂ ಬೌದ್ಧಧರ್ಮ ಅನುಸರಿಸಬೇಕು ಎಂದರು. ಸ್ಫೂ ರ್ತಿಧಾಮದ ವಿನಯ ರಖ್ಖಿತ ಭಂತೇಜಿ, ಬೌದ್ದ ಸಂಶೋಧಕ ಡಾ.ಬಿ.ಕೆಎಸ್.ವರ್ಧನ್ ಹಾಜರಿದ್ದರು.
Advertisement