ಅನ್ನಭಾಗ್ಯ ವಿರೋಧಿಗಳು ಸಂವೇದನೆ ಇಲ್ಲದವರು: ಸಿಎಂ ಮಾಧ್ಯಮ ಸಲಹೆಗಾರ ಅಮೀನ್‍ಮಟ್ಟು ವ್ಯಂಗ್ಯ

ಅನ್ನಭಾಗ್ಯ ಫಲಾನುಭವಿಗಳು ಸಿಡಿದೆದ್ದರೆ ಭೈರಪ್ಪ ಅವರಂತಹ ವಿರೋಧಿಗಳು ಕೊಚ್ಚಿ ಹೋಗುತ್ತಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು(ಸಂಗ್ರಹ ಚಿತ್ರ)
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು(ಸಂಗ್ರಹ ಚಿತ್ರ)

ಚಿತ್ರದುರ್ಗ: ಅನ್ನಭಾಗ್ಯ ಯೋಜನೆ ವಿರೋಧಿಸುವವರು ಸಂವೇದನೆ ಕಳೆದುಕೊಂಡವರು ಎಂದಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಅನ್ನಭಾಗ್ಯ ಫಲಾನುಭವಿಗಳು ಸಿಡಿದೆದ್ದರೆ ಭೈರಪ್ಪ ಅವರಂತಹ ವಿರೋಧಿಗಳು ಕೊಚ್ಚಿ ಹೋಗುತ್ತಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಸಂಘರ್ಷ ಸಮಿತಿ ಆಯೋಜಿಸಿದ್ದ `ಅನ್ನಭಾಗ್ಯ ಏನು? ಎತ್ತ?' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೈರಪ್ಪ ಅವರ ಸಾಹಿತ್ಯದ
ಬಗ್ಗೆ ಗೌರವ ಇದೆ. ಸಾಹಿತ್ಯ ಮೀರಿ ಮಾನವೀಯತೆಯಿಂದ ನಡೆದುಕೊಳ್ಳಬೇಕು.
ರಾಷ್ಟ್ರೀಯ ಸಂಸ್ಥೆಯೊಂದು ಸಮೀಕ್ಷೆ ಮಾಡಿರುವ ಪ್ರಕಾರ ಶೇ.75 ರಷ್ಟು ಜನರ ತಲಾಆದಾಯ ಕೇವಲ ರೂ 50. ಇದರಿಂದ ಬಡತನ ಎಷ್ಟಿದೆ ಎಂಬ ಅರಿವಾಗುತ್ತದೆ. ಬಡವರನ್ನು ನೋಡಲು ಕಣ್ಣುಗಳು ಇರಬೇಕು. ಆದರೆ, ಅನ್ನಭಾಗ್ಯ ಟೀಕಿಸುವ ಭೈರಪ್ಪ ಅಂತಹ ವಿರೋಧಿಗಳು ಕಣ್ಣು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಸರ್ಕಾರದ 2014-15ರ ಬಜೆಟ್ 1.40 ಲಕ್ಷ ಕೋಟಿ. ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟ
ಹಣ ರೂ 4500 ಕೋಟಿ. ಖರ್ಚು ಆಗಿರುವುದು 2500 ಕೋಟಿ. ಉಳಿದ ಹಣ 2 ಸಾವಿರ
ಕೋಟಿಯಲ್ಲಿ ಬಡವರಿಗೆ ಮತ್ತೊಂದು ಯೋಜನೆ ಕೊಡುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗುವುದು ಎಂದರು. ಲಕ್ಷ, ಲಕ್ಷ  ಹಣ ಇರುವ ಭೈರಪ್ಪ ಏಕೆ ಸೋಮಾರಿಯಾಗಲಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿ, ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದಾಗ ಹಣ ಎಲ್ಲಿಂದ ತರುತ್ತಾರೆ? ಸೋಮಾರಿಗಳಾಗುತ್ತಾರೆ. ಅಕ್ಕಿ ನೀಡುವ ಸರ್ಕಾರ ದಿವಾಳಿಯಾಗಲಿದೆ ಎಂಬ ಟೀಕೆ ಎದುರಾದವು. ಹಣ ತರುವ ಚಿಂತೆ ಮುಖ್ಯಮಂತ್ರಿಗೆ ಬಿಟ್ಟಿದ್ದು. ಇದರ ಬಗ್ಗೆ ಉಳಿದವರಿಗೆ ಏಕೆ ಚಿಂತೆ ಎಂದರು.

ವಾರದನ್ನ ಪದ್ಧತಿಯಲ್ಲಿ ಬೆಳೆದವರು ಬಾಲ್ಯದ ಕಷ್ಟದ ದಿನಗಳನ್ನು ಮರೆತಿದ್ದಾರೆ. ಭೈರಪ್ಪ ಅವರಿಗೂ ನೆನಪು ಇಲ್ಲದಂತಾಗಿದೆ. ಕೇಂದ್ರದಿಂದ ಲಕ್ಷ ಲಕ್ಷ  ಸಂಭಾವನೆ ಪಡೆದಿರುವ ಭೈರಪ್ಪ ಈಗ ಲಕ್ಷಾಧೀಶ.  ಹಾಗಾದರೆ ಭೈರಪ್ಪ ಏಕೆ ಸೋಮಾರಿಯಾಗಲಿಲ್ಲ
ಎಂದ ಅವರು, ಪರಿಶಿಷ್ಟ ಜಾತಿ ಮತ್ತು ಪಂಡಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ 16 ಸಾವಿರ ಕೋಟಿ ಬಜೆಟ್‍ನಲ್ಲಿ ಮೀಸಲಿಟ್ಟಿದೆ. ಕಾನೂನು ಪ್ರಕಾರ ಶೇಕಡ 24 ರಷ್ಟು ಹಣವನ್ನು ನೀಡಬೇಕಾದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಭೈರಪ್ಪ ಅವರಿಗೆ ಸವಾಲು ಹಾಕಿದರು.

ಹೆಚ್ಚು ಜಮೀನಿದ್ದರೆ ಬಡವರಿಗೆ ಕೊಡಲಿ:
ಭೂಮಾಲೀಕರು 50 -60  ಎಕರೆ ಜಮೀನು ಇಟ್ಟುಕೊಂಡರೆ ಕೆಲಸ ಮಾಡುವವರು ಯಾರು? ಎಂದು ಕೇಳುವವರು ಇದರ ಬದಲಿಗೆ ಎಷ್ಟು ಬೇಕೋ ಅಷ್ಟು ಜಮೀನು ಇಟ್ಟುಕೊಂಡು ಉಳಿದುದ್ದನ್ನು ಬಡವರಿಗೆ ಕೊಟ್ಟರೆ ಕೂಲಿಕಾರರ ಸಮಸ್ಯೆ ಬರುವುದಿಲ್ಲ. ಬಡವರು ಕೂಲಿ ಕೆಲಸಕ್ಕೆ ಬರಬೇಕೆನ್ನುವ ಧೋರಣೆ ಅಮಾನುಷ ಎಂದು ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com