ಅಭಿವೃದ್ಧಿಯತ್ತ ಅರಸು ಹುಟ್ಟೂರು

ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮಶತಮಾನೋತ್ಸವವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರವು...
ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು (ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು (ಸಂಗ್ರಹ ಚಿತ್ರ)

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮಶತಮಾನೋತ್ಸವವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರವು ಅರಸು ಅವರ ಹುಟ್ಟೂರು ಕಲ್ಲಹಳ್ಳಿಯನ್ನು ದತ್ತು ತೆಗೆದುಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಅರಸು ಜನ್ಮಶತಮಾನೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಸೋಮವಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಉದ್ಘಾಟನಾ ಸಮಾರಂಭವನ್ನು ಆಗಸ್ಟ್ 20ರಂದು ಕಲ್ಲಹಳ್ಳಿಯಲ್ಲಿ ನಡೆಸಲಾಗುವುದು.
ಮಾಜಿ ಸಂಸದ ಎಚ್. ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಇಂದಿನಿಂದಲೇ ಈ ಸಮಿತಿ ಕಾರ್ಯಾರಂಭ ಮಾಡುತ್ತದೆ ಎಂದು ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಅರಸು ಅವರ ಅಧಿಕಾರಾವಧಿ ಕರ್ನಾಟಕದ ಮಟ್ಟಿಗೆ ಬಡವರ ಸುವರ್ಣಯುಗ ಎಂದೇ ಕರೆಯಬೇಕು. ಬಡವರು, ದೀನ, ದುರ್ಬಲರಿಗೆ ಭೂ ಒಡೆತನ ನೀಡಿದ್ದು ಮಾತ್ರವಲ್ಲ, ಹಿಂದುಳಿದ ವರ್ಗದ ಏಳ್ಗೆಯ ಹರಿಕಾರನಾಗಿ ಅರಸು ಆಡಳಿತ ನಡೆಸಿದರು. ಕಲ್ಲಹಳ್ಳಿಯನ್ನು ಸರ್ಕಾರ ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿಪಡಿಸುತ್ತದೆ. ಜತೆಗೆ ಹುಣಸೂರಿನಲ್ಲಿ ರು. 5 ಕೋಟಿ ವೆಚ್ಚದಲ್ಲಿ ದೇವರಾಜ ಅರಸು ಭವನವನ್ನು ನಿರ್ಮಿಸಲಾಗುವುದು. ಇದಕ್ಕಾಗಿ 2 ಎಕರೆ ಜಾಗವನ್ನೂ ಗುರುತಿಸಲಾಗಿದೆ ಎಂದರು. ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯಲಿದ್ದು, ಅರಸು ಅವರ ವ್ಯಕ್ತಿತ್ವ, ವಿಚಾರಧಾರೆ, ರಾಜಕೀಯ ಜೀವನದ ಬಗ್ಗೆ ಸಾಹಿತ್ಯ ಪ್ರಕಟಣೆ, ಕಥಾಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಚಿಂತನಾ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುವುದು. ಅವರ ಅಪರೂಪದ ಭಾವಚಿತ್ರ ಸಂಗ್ರಹಿಸಿ ಆಲ್ಬಂ ತಯಾರಿಸಲಾಗುವುದು. ಜತೆಗೆ
100 ವಸತಿ ನಿಲಯ ಸ್ಥಾಪನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಅರಸು ಸ್ಟಾಂಪ್: ದೇವರಾಜ್ ಅರಸು ಜನ್ಮಶತಮಾನೋತ್ಸವದ ಅಂಗವಾಗಿ ಅಂಚೆ ಚೀಟಿ ಬಿಡುಗಡೆ ಯಾಗಬೇಕಿದೆ. ಈ ಸಂಬಂಧ ಸದ್ಯದಲ್ಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಲಿದ್ದು, ಅಂಚೆ ಚೀಟಿ ಬಿಡುಗಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುವುದು. 2016ರ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಸಲಾಗುವುದು. ದೇವರಾಜ ಅರಸು ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಡಾ. ಒ. ಅನಂತರಾಮಯ್ಯ, ಪ್ರೋ. ಮುಜಾಫರ್ ಅಸಾದಿ, ಡಾ. ಬಿ.ಕೆ. ರವಿ, ಪ್ರೋ. ಎನ್.ವಿ.ನರಸಿಂಹಯ್ಯ, ಪ್ರೊ. ಕೆ.ಕೆ.ಸೀತಮ್ಮ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಆ.20ರೊಳಗೆ ಆಯ್ಕೆ ಪಟ್ಟಿ ಕೊಡುವಂತೆ ಸೂಚಿಸಲಾಗಿದೆ ಎಂದರು.

ಪ್ರಶಸ್ತಿ: ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸಭೆ ಯಲ್ಲಿ ಪ್ರಸ್ತಾಪವಾಗಿದೆ. ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರೇ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಮರಣೋತ್ತರವಾಗಿ ಈ ಪ್ರಶಸ್ತಿ ನೀಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಎಚ್.ವಿಶ್ವನಾಥ್, ದೇವರಾಜ್ ಅರಸು ಅವರ ಪುತ್ರಿ ಭಾರತಿ ಅರಸ್ ಉಪಸ್ಥಿತರಿದ್ದರು.


ಅರಸು ಜನ್ಮಶತಮಾನೋತ್ಸವ ಕಾರ್ಯಕ್ರಮದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಸಿದ್ದೇವೆ. ಅವರ ಹುಟ್ಟೂರಾದ ಕಲ್ಲಹಳ್ಳಿಯನ್ನು ದತ್ತು ತೆಗೆದುಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com