
ಬೆಂಗಳೂರು: ನಗರದ ಐತಿಹಾಸಿಕ ಬೆಂಗಳೂರು ಕ್ಲಬ್ ವಿವಾದ ಈಗ ಮತ್ತಷ್ಟು ಕಗ್ಗಂಟಾಗಿದೆ. ಈ ಜಾಗ ರಾಜ್ಯ ಸರ್ಕಾರದ್ದು ಅಲ್ಲ, ಬೆಂಗಳೂರು ಕ್ಲಬ್‍ದೂ ಅಲ್ಲ. ಇದು ರಕ್ಷಣಾ ಇಲಾಖೆಗೆ ಸೇರಿದ ಸ್ವತ್ತು ಎಂದು ವಕೀಲರಾದ ಶಶಾಂಕ್ ಕುಮಾರ್ ಮತ್ತು ಜಿ.ಚಲುವರಾಜ್ ಹೈಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ದಾಖಲಿಸಿದ್ದಾರೆ.
ಈ ಹಿಂದೆ ಉಪ ಆಯುಕ್ತರು ಕ್ಲಬ್ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶದಲ್ಲಿ ರಕ್ಷಣಾ ಇಲಾಖೆ ಸಹ ಪ್ರತಿವಾದಿಯಾಗಿತ್ತು. ಆದರೆ ಮಾಲೀಕತ್ವ ಪ್ರಶ್ನಿಸಿ ಬೆಂಗಳೂರು ಕ್ಲಬ್ ಹೈಕೋರ್ಟ್ ನಲ್ಲಿ ದಾಖಲಿಸಿರುವ ಅರ್ಜಿಯಲ್ಲಿ ರಕ್ಷಣಾ ಇಲಾಖೆಯ ಮಹಾ ನಿರ್ದೇಶಕರು ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಿ ಅವರ ವಾದ ಕೂಡ ಆಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಆ. 20ಕ್ಕೆ ಮುಂದೂಡಿದೆ.
ರೂ. 3,000 ಕೋಟಿ ಮೌಲ್ಯ ಕ್ಲಬ್ ಜಾಗ: ನಗರದ ರಿಚ್‍ಮಂಡ್ ವೃತ್ತದ ಬಳಿಯ ಬೆಂಗಳೂರು ಕ್ಲಬ್‍ಗೆ ಸೇರಿದ ಎನ್ನಲಾದ ಜಾಗವನ್ನು ಬ್ರಿಟಿಷ್ ಮಿಲಿಟರಿ ರೆಜಿಮೆಂಟ್ (ತುಕಡಿ)ಗಾಗಿ ಜನರಲ್ ಕಮಿಟಿ ಆಫ್ ಬೆಂಗಳೂರು ಯುನೈಟೆಡ್ ಸರ್ವಿಸ್ ಕ್ಲಬ್ ಖರೀದಿಸಿತ್ತು. 1873ರ ಆ.30ರಂದು ಜಾಗದ ಕ್ರಯಪತ್ರವಾಗಿದೆ. ಈ ಜಾಗದ ಒಡೆತನ ಸಂಪೂರ್ಣ ಬ್ರಿಟಿಷ್ ಕಚೇರಿಯದ್ದಾಗಿತ್ತು. ಬ್ರಿಟಿಷ್ ಸೇನೆಯ ಅಧಿಕಾರಿಗಳ ಪ್ರಧಾನ ಸಮಿತಿಯು ಬೆಂಗಳೂರು ಯುನೈಟೆಡ್ ಸರ್ವಿಸ್ ಕ್ಲಬ್ ರೂಪಿಸಿತ್ತು. ಆದರೆ, 1947ರ ಸ್ವಾತಂತ್ರ ನಂತರ ಇಡೀ ಜಾಗವು ರಕ್ಷಣಾ ಇಲಾಖೆಯ ಮತ್ತು ಕ್ಲಬ್ ವಶದಲ್ಲಿತ್ತು. ಆದರೆ, ನಗರದ ಕೆಲ ಗಣ್ಯ ನಾಗರಿಕರು ಸ್ವಂತ ತಂಡ ರಚಿಸಿಕೊಂಡು ರೂ.3,000 ಕೋಟಿ ಮೌಲ್ಯದ ರಕ್ಷಣಾ ಇಲಾಖೆಯ ಆಸ್ತಿ ಅತಿಕ್ರಮಿಸಿ ಅದಕ್ಕೆ `ಬೆಂಗಳೂರು ಕ್ಲಬ್' ಎಂದು ಮರು ನಾಮಕರಣ ಮಾಡಿದ್ದರು. ಆದರೆ, ಅರ್ಜಿದಾರರಾದ ಬೆಂಗಳೂರು ಕ್ಲಬ್, ಯಾವುದೇ ನಾಗರಿಕ ತಂಡಕ್ಕೆ ಈ ಜಾಗವನ್ನು ಮಂಜೂರು, ಗುತ್ತಿಗೆ, ಬಹುಮಾನ ಅಥವಾ ವರ್ಗಾವಣೆ ಮಾಡಿಲ್ಲ ಎಂದು ಆರೋಪಿಸಿದೆ.
ಬ್ರಿಟಿಷರು ದೇಶದಿಂದ ಹೊರಟ ನಂತರ ಈ ಘಟಕವನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಹೀಗಾಗಿ, ಈ ಜಾಗ ತನಗೆ ಸೇರಿದೆ' ಎಂಬ ಬೆಂಗಳೂರು ಕ್ಲಬ್ ಹೇಳಿಕೆ ಸತ್ಯಕ್ಕೆ ದೂರ ಮತ್ತು ಆಧಾರ ರಹಿತ. ಬ್ರಿಟಿಷರು ಯಾರಿಗೂ ಈ ಜಮೀನು ನೀಡಿಲ್ಲ. ಸ್ವಾತಂತ್ರ್ಯದ ನಂತರ ರಕ್ಷಣಾ ಇಲಾಖೆಯನ್ನು ಕತ್ತಲಲಿಟ್ಟು ಕ್ಲಬ್ ಈ ಜಾಗದ ನಿರ್ವಹಣೆ ಮಾಡುತ್ತಿದೆ. ಇದರಿಂದ ರಾಜ್ಯ ಸರ್ಕಾರವು ಜಾಗ ತೆರವುಗೊಳಿಸಲು ಕ್ಲಬ್ ಮತ್ತು ರಕ್ಷಣಾ ಇಲಾಖೆಗೆ ನೋಟಿಸ್ ನೀಡಿ ಆದೇಶಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Advertisement