
ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದು ಮುಂದುವರಿಯದಂತೆ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
`ಈ ಹಿಂದೆ ಬೆಂಗಳೂರಿನಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗಲೂ ಇದೇ ರೀತಿಯ ಮನವಿ ಮಾಡಿದ್ದೆ. ಆದರೆ, ಸರ್ಕಾರ ಮಾತ್ರ ಎಚ್ಚತ್ತಿರುವಂತೆ ಕಾಣುತ್ತಿಲ್ಲ. ಈಗ ಮೂರು ವರ್ಷದ ಮಗು, ಆಗಸ್ಟ್ 3ರಂದು ಇಂದಿರಾನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಭದ್ರತಾ ಸಿಬ್ಬಂದಿಯೊಬ್ಬರನ್ನು ಪೊಕ್ಸೊ ಕಾಯಿದೆಯಡಿ ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇರುವುದು ತಮ್ಮ ಸರ್ಕಾರದ ವಿಫಲತೆ ಎತ್ತಿ ತೋರಿಸಿದಂತಿದೆ' ಎಂದಿದ್ದಾರೆ. `ಒಂದು ಸರ್ಕಾರ ತನ್ನ ಅತ್ಯಂತ ದುರ್ಬಲರನ್ನು, ಅಂದರೆ ಮಕ್ಕಳನ್ನು ಸಂರಕ್ಷಿಸುವ ಜವಾಬ್ದಾರಿಯ ನಿರ್ವಹಣೆಯಲ್ಲಿ ಪದೇ ಪದೇ ವಿಫಲಾಗುತ್ತಿದ್ದಲ್ಲಿ, ಆ ಸರ್ಕಾರವನ್ನು ಒಂದು ವಿಫಲ ಸರ್ಕಾರವೆಂದು ಮತ್ತು ತಾನು ಸೇವೆ ಮಾಡುತ್ತಿರುವ ಜನರಿಗೆ ಭ್ರಮನಿರಸನವುಂಟು ಮಾಡಿದೆಯೆಂದು ಹೇಳಬಹುದು. ಕಳೆದ ವರ್ಷ ನಡೆದ ಇಂತಹದ್ದೆ ಘಟನೆಯಿಂದ ಅಗತ್ಯ ಕ್ರಮ ತೆಗೆದುಕೊಳ್ಳದ ಪರಿಣಾಮ ಈಗ ಮತ್ತೊಮ್ಮೆ ಮರುಕಳಿಸಿದೆ. ನಾನು ಪತ್ರ ಬರೆದು ಮಾಧ್ಯಮಗಳ ಮೂಲಕ ಹೇಳಿಕೆಗಳನ್ನು ನೀಡಿ, ತಮಗೆ ಮತ್ತು ತಮ್ಮ ಸರ್ಕಾರಕ್ಕೆ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಆಗ್ರಹಿಸುತ್ತಲೇ ಬಂದಿದ್ದೇನೆ. ಇಂತಹ ಹೇಯ ಅಪರಾಧ ಕೃತ್ಯ ತಡೆಯಲು ಕೆಲವು ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದೆ. ಸರ್ಕಾರದ ನಿರ್ಲಕ್ಷ್ಯ. ಉದಾಸೀನ ಧೋರಣೆಗಳ ನಿರ್ಲಜ್ಜ ದ್ಯೋತಕ ಎಂದಿರುವ ರಾಜೀವ್,
ಸರ್ಕಾರದ ಉದಾಸೀನ ಧೋರಣೆ ಹೀಗೆ ಮುಂದುವರಿಸಿದಲ್ಲಿ ಅದನ್ನು ಕ್ಷಮಿಸುವುದಾಗಲೀ , ನಿರ್ಲಕ್ಷ್ಯಿಸುವುದಾಗಲೀ ಸಹಿಸುವುದಿಲ್ಲ. ಏಕೆಂದರೆ ಮಕ್ಕಳ ಮೇಲಿನ ದೌರ್ಜನ್ಯ ಭಯೋತ್ಪಾದಕತೆ ಎಂದು ಸಮಸ್ಯೆಯ ತೀವ್ರತೆಯನ್ನು ಬಿಂಬಿಸಿದ್ದಾರೆ.
Advertisement