ದಸರಾ ಮಹೋತ್ಸವವವನ್ನು ಭೈರಪ್ಪನವರಿಂದ ಉದ್ಘಾಟಿಸಿ: ಸಿಎಂ ಗೆ ಸಂಸದ ಪ್ರತಾಪ್ ಸಿಂಹ ಪತ್ರ

ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರನ್ನು ಆಮಂತ್ರಿಸಬೇಕು ಎಂದುಸಂಸದ ಪ್ರತಾಪ್ ಸಿಂಹ ಸಿಎಂ ಗೆ ಮನವಿ ಮಾಡಿದ್ದಾರೆ
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ

ಮೈಸೂರು: ಪ್ರಸಕ್ತ ಸಾಲಿನ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರನ್ನು ಆಮಂತ್ರಿಸಬೇಕು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಾಡ ಹಬ್ಬ ದಸರಾ ಸಮೀಪಿಸುತ್ತಿರುವುದರಿಂದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ದಸರಾ ಉದ್ಘಾಟನೆಗೆ ಎಸ್.ಎಲ್ ಭೈರಪ್ಪನವರೇ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಕಳೆದ ಬಾರಿಯ ದಸರಾ ಹಬ್ಬದ ಪೂರ್ವಭಾವಿ ಸಭೆಯಲ್ಲಿ ದಸರಾ ಉದ್ಘಾಟನೆಯ ಬಗ್ಗೆ ಚರ್ಚಿಸಿದಾಗಲೂ ಭೈರಪ್ಪನವರ ಹೆಸರು ಪ್ರಸ್ತಾಪಿಸಿದಾಗ ಸಿದ್ದರಾಮಯ್ಯ ಅವರು 'ಮುಂದಿನ ಬಾರಿಗೆ' ಎಂದು ಹೇಳಿದ್ದನ್ನು ಪ್ರತಾಪ್ ಸಿಂಹ ನೆನಪಿಸಿದ್ದಾರೆ.
ಆಗಸ್ಟ್ 10ಕ್ಕೆ ದಸರಾ ಪೂರ್ವಭಾವಿ ಸಭೆ ನಡೆಯಲಿದೆ. ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೂ ಆಗಿರುವ ಬೈರಪ್ಪ ಅವರಿಗೆ ದಸರಾ ಬಗ್ಗೆ ಅಪಾರವಾದ ಅಭಿಮಾನವಿದೆ. ಡಾ. ಎಸ್. ಎಲ್ ಭೈರಪ್ಪನವರು ಕನ್ನಡ ಸಾಹಿತ್ಯವನ್ನು ಹೊರನಾಡಿಗೂ ಮುಟ್ಟಿಸಿದವರು. ಪ್ರಪಂಚದ ಕಾದಂಬರಿ ಕ್ಷೇತ್ರದಲ್ಲಿ ವಿಭಿನ್ನ ಛಾಪನ್ನು ಮೂಡಿಸಿದವರು. ಮೈಸೂರಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಟ್ಟಗಳನ್ನು ಎತ್ತರಿಸಿದವರು. ಕನ್ನಡ ಸಾಹಿತ್ಯಿಕ ಲೋಕವನ್ನು ವಿಶ್ವಮಾನ್ಯ ಮಾಡಿದ ಮಹನೀಯರಲ್ಲಿ ಮಾನ್ಯ ಭೈರಪ್ಪನವರು ಒಬ್ಬರು. ಈ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಭೈರಪ್ಪನವರೇ ಸೂಕ್ತ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.  ಅಲ್ಲದೇ ಕಳೆದ ಬಾರಿಯ ತಮ್ಮ ಬೇಡಿಕೆಯನ್ನು ಈ ಬಾರಿ ಮಾನ್ಯ ಮಾಡಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com