ಭುಗಿಲೆದ್ದಿದೆ ಆಕ್ರೋಶ ಶುರುವಾಯ್ತು ಬಂಡಾಯ

ಬಿಬಿಎಂಪಿ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ಕಾಂಗ್ರೆಸ್‍ನ ಗಜ ಪ್ರಸವ ಕೊನೆಗೂ ಮುಗಿದಿದೆ. ಹಾಗೆಯೇ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಬೆನ್ನಲ್ಲೆ ಬಂಡಾಯದ ಬೆಂಕಿ ಕೂಡ ಕಾಣಿಸಿಕೊಂಡಿದೆ...
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಬಿಬಿಎಂಪಿ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ಕಾಂಗ್ರೆಸ್‍ನ ಗಜ ಪ್ರಸವ ಕೊನೆಗೂ ಮುಗಿದಿದೆ. ಹಾಗೆಯೇ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಬೆನ್ನಲ್ಲೆ ಬಂಡಾಯದ ಬೆಂಕಿ ಕೂಡ ಕಾಣಿಸಿಕೊಂಡಿದೆ.

ನಾಲ್ಕು ದಿನಗಳ ಸತತ ಕಸರತ್ತಿನ ನಂತರ ಕಾಂಗ್ರೆಸ್ 197 ವಾರ್ಡ್‍ಗಳಿಗೆ ಅಭ್ಯರ್ಥಿಗಳನ್ನು ಬಿಡುಗಡೆಗೊಳಿಸಿದ್ದು, ಎಲ್ಲ ಅಭ್ಯರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಬಳಿ ಬಿ ಫಾರಂ ಕೂಡ ನೀಡಿದೆ. ಆದರೆ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದ ಮಾಜಿ ಮೇಯರ್ ಕೆ. ಚಂದ್ರಶೇಖರ್ ಸೇರಿದಂತೆ ಅನೇಕ ಮಾಜಿ ಕಾರ್ಪೊರೇಟರ್ ಗಳಿಗೆ ಟಿಕೆಟ್ ಕೈ ತಪ್ಪಿದೆ.

ಈಗ ಬಿಡುಗಡೆಯಾಗಿರುವ ಪಟ್ಟಿ ಪಕ್ಷದ ಮಾರ್ಗಸೂಚಿ ಪ್ರಕಾರ ಇದೆಯೇ ಎನ್ನುವುದು ಸೋಮವಾರ ಖಾತರಿಯಾಗಲಿದ್ದು, ಇದನ್ನು ತಿಳಿದು ಕೆಲವು ಸದಸ್ಯರು ಬಂಡಾಯದ ಭಾವುಟ ಹಾರಿಸಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಆಯ್ಕೆ ಮಾಡಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ನಾಲ್ಕು ದಿನಗಳಿಂದ ಪಟ್ಟಿ ಸಿದ್ಧಪಡಿಸಲು ತಿಣುಕಾಡುತ್ತಿತ್ತು. ಈಗ ಖಾಸಗಿ ರೆಸಾರ್ಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಮುಖಂಡರ ಸಭೆ ನಡೆಸಲಾಗುತ್ತಿತ್ತು. ಇದರ ಫಲವಾಗಿ ಭಾನುವಾರ 197 ವಾರ್ಡ್ ಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೆ, ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರ ವಾರ್ಡ್ ನ ಅಭ್ಯರ್ಥಿ ಆಯ್ಕೆಯನ್ನು ತಾಂತ್ರಿಕ ಕಾರಣದಿಂದ ಸೋಮವಾರದವರೆಗೂ ಮುಂದೂಡಲಾಗಿದೆ. ಹಾಗೆಯೇ ಸೋಮವಾರ ಸಂಜೆ 4ಗಂಟೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಕುರಿತ ಸಭೆ ನಡೆಯಲಿದೆ.

ಬಂಡಾಯ ಎಲ್ಲಿ ಹೇಗೆ?: ಬಿಬಿಎಂಪಿಗೆ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ 65 ಸದಸ್ಯರ ಪೈಕಿ 22 ಸದಸ್ಯರಿಗೆ ಸದ್ಯದ ಮೀಸಲು ನಿಗದಿ ಪ್ರಕಾರ ಚುನಾವಣೆಗೆ ಸ್ಪರ್ಧಿಸುವುದು ಅಸಾಧ್ಯ. ಆದ್ದರಿಂದ ಪ್ರಬಲ ಆಕಾಂಕ್ಷಿಗಳಿಗೆ ಅವರ ಪತ್ನಿಗೆ ಟಿಕೆಟ್ ನೀಡುವ ಮೂಲಕ ಸಮಾಧಾನಗೊಳಿಸಲಾಗಿದೆ. ಆದರೆ, ಸ್ಪರ್ಥಿಸಲು ಮೀಸಲು ಅವಕಾಶ ಇದ್ದರೂ ಸುಭಾಷ್ ನಗರ ವಾರ್ಡ್ ನ ಮಲ್ಲೇಶ್, ಜಯನಗರ ಪೂರ್ವ ಮುನಿಸಂಜೀವಯ್ಯ ಹಾಗೂ ಮಹಾದೇವಪುರದ ಇಬ್ಬರು ಸದಸ್ಯರಿಗೆ ಟಿಕೆಟ್ ನೀಡಲು ನಿರಾಕರಿಸಲಾಗಿದೆ. ಇದಕ್ಕೆ ಸ್ಥಳೀಯ ನಾಯಕರೇ ಕಾರಣ ಎಂದು ದೂರಿದ್ದಾರೆ.

ಅಮಾನತುಗೊಂಡಿರುವ ಮಾಜಿ ಸದಸ್ಯರಾದ ಎಂ.ನಾಗರಾಜ್, ಶಿವರಾಜ್ ಹಾಗೂ ಶಿಸ್ತು ಕ್ರಮಕ್ಕೆ ಗುರಿಯಾಗಿದ್ದ ಜಾಕೀರ್ ಮತ್ತು ಸಂಪತ್‍ರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷ ವಿರೋಧಿಗಳಿಗೆ ಟಿಕೆಟ್ ನೀಡಬಾರದು ಎನ್ನುವುದಾದರೂ ಈ ನಾಲ್ವರಿಗೂ ಟಿಕೆಟ್ ಹಂಚಿಕೆ ಮಾಡಬಾರದಿತ್ತು. ಆದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಟಿಕೆಟ್ ವಂಚಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com