
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ ಮಾನ್ಯತೆ ಸಂಬಂಧ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಯಿಂದ ಸ್ಪಷ್ಟನೆ ಬರುವವರೆಗೂ ಪ್ರವೇಶ ಪ್ರಕ್ರಿಯೆ ಆರಂಭಿಸದಿರಲು ವಿವಿ ತೀರ್ಮಾನಿಸಿದೆ ಎಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ತಿಳಿಸಿದರು.
ಸಿಂಡಿಕೇಟ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ (ಎಂಎಚ್‍ಆರ್‍ಡಿ) ಬೆಂ. ವಿವಿ ದೂರ ಶಿಕ್ಷಣ ಕೋರ್ಸ್‍ಗಳ ಮಾನ್ಯತೆ ರದ್ದುಗೊಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನಾನು ಮತ್ತು ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಟಿ.ಡಿ. ಕೆಂಪರಾಜು ಅವರು ದೆಹಲಿಯ ಎಂಎಚ್‍ಆರ್‍ಡಿ ಕಚೇರಿಗೆ ಭೇಟಿ ನೀಡಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಣೆ ನೀಡಿದ್ದೇವೆ ಎಂದರು. 2009ರ ನಂತರದಲ್ಲಿ ವಿಶ್ವವಿದ್ಯಾಲಯದ ಯುಜಿಸಿ ತಜ್ಞರ ತಂಡ ವಿವಿಗೆ ಭೇಟಿ ನೀಡಿಲ್ಲ. ಈ ಮಧ್ಯೆ ದೂರ ಶಿಕ್ಷಣ ನಿರ್ದೇಶನಾಲಯ ಇಗ್ನೊ ಈಗ ಯುಜಿಸಿ ಅಧೀನಕ್ಕೆ ಬಂದಿದೆ. ಹಾಗಾಗಿ ತಜ್ಞರ ತಂಡ ವಿವಿಗೆ ಸೂಕ್ತ ಸಮಯಕ್ಕೆ ಭೇಟಿ ನೀಡಿಲ್ಲ ಎಂದು ತಿಳಿದು ಬಂದಿದೆ. ಒಟ್ಟಾರೆ ಯುಜಿಸಿ ತನ್ನ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿ ಸೂಕ್ತ ನಿರ್ಧಾರಕ್ಕೆ ಬಂದ ನಂತರ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸ್ಕೂಲ್ ಆಫ್ ಎಕನಾಮಿಕ್ಸ್: ಬೆಂಗಳೂರು ವಿವಿ ಆವರಣದಲ್ಲಿ ಡಾ. ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು 2016-17ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ನಿಯೋಜಿಸಲಾಗಿದೆ. ವಿವಿಯು ಸ್ಥಳಾವಕಾಶ ನೀಡಲಿದ್ದು, ಜಿಂದಾಲ್ ಸಂಸ್ಥೆ ಕಟ್ಟಡ ನಿರ್ಮಾಣ ಮಾಡಿಕೊಡಲಿದೆ. ನಿರ್ಮಾಣಕ್ಕೆ ಸುಮಾರು 50ರಿಂದ 100 ಕೋಟಿ ವೆಚ್ಚ ಆಗುವ ಕಾರಣ ಈ ಶಾಲೆಗೆ ಡಾ. ಸೀತಾರಾಂ ಜಿಂದಾಲ್ ಸ್ಕೂಲ್ ಆಫ್ ಎಕನಾಮಿಕ್ಸ್ ಹೆಸರಿಡಬೇಕೆಂಬ ಬೇಡಿಕೆಯನ್ನು ವಿವಿ ಒಪ್ಪಿಕೊಂಡಿದೆ. 4ರಿಂದ 5 ವಿಭಾಗಗಳು ಪ್ರಾರಂಭವಾಗಲಿದ್ದು, ಶೇ.50ರಷ್ಟು ವಿವಿ ವಿದ್ಯಾರ್ಥಿಗಳು, ಶೇ.25ರಷ್ಟು ರಾಜ್ಯದ ವಿದ್ಯಾರ್ಥಿಗಳು, ಶೇ.25ರಷ್ಟು ದೇಶದ ವಿದ್ಯಾರ್ಥಿಗಳಿಗೆ ಸೀಟು ನೀಡಲು ತೀರ್ಮಾನಿಸಲಾಗಿದೆ ಎಂದರು.
ಒಂದೇ ಕೋರ್ಸ್ ಎರಡು ಕಡೆ: ಬೆಂಗಳೂರು ವಿವಿ ತ್ರಿಭಜನೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವುದರಿಂದ ಜ್ಞಾನಭಾರತಿಗೆ ಬಾರಲು ಒಪ್ಪದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗಾಗಿ ಎರಡು ಕಡೆ ಒಂದೇ ಕೋರ್ಸ್‍ಗಳನ್ನು ನಡೆಸಲು ವಿವಿ ನಿರ್ಧರಿಸಿದೆ. ಗಣಿತ, ಸಮೂಹ ಸಂವಹನ, ರಾಸಾಯನಶಾಸ್ತ್ರ ವಾಣಿಜ್ಯ, ಮ್ಯಾನೇಜ್‍ಮೆಂಟ್ ಕೋರ್ಸ್‍ಗಳ ಮೊದಲ ವರ್ಷದ ತರಗತಿಗಳು ಎರಡು ಕ್ಯಾಂಪಸ್‍ನಲ್ಲಿಯೂ ನಡೆಯಲಿವೆ
ಎಂದು ಕುಲಪತಿ ಪ್ರೊ ಬಿ. ತಿಮ್ಮೇಗೌಡ ವಿವರಿಸಿದರು.
Advertisement