ಬೆಂಗಳೂರು: ಶ್ರಾವಣ ಮಾಸದ ಮತ್ತೊಂದು ಹಬ್ಬ, ಮಹಿಳೆಯರ ಅಚ್ಚುಮೆಚ್ಚಿನ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಾಜಧಾನಿಯ ಎಲ್ಲಾ ಮಾರುಕಟ್ಟೆಗಳಲ್ಲೂ ಮಹಿಳಾ ಗ್ರಾಹಕರದ್ದೇ ಕಾರುಬಾರು. ನಿನ್ನೆ ಕೆ.ಆರ್. ಮಾರುಕಟ್ಟೆಯಂತೂ ಜನರಿಂದ ತುಂಬಿತುಳುಕುತ್ತಿತ್ತು.
ಹಾಗೆಂದ ಮಾತ್ರಕ್ಕೆ ಹೂವು-ಹಣ್ಣುಗಳ ಬೆಲೆಯಲ್ಲೇನು ಕಡಿಮೆಯಿಲ್ಲ. ಪ್ರತಿಹಬ್ಬಕ್ಕೆ ಹೂವು-ಹಣ್ಣಿನ ಬೆಲೆ ಏರುವಂತೆ ಈ ಬಾರಿಯೂ ಏರಿಕೆಯಾಗಿದೆ. ಹಬ್ಬಕ್ಕೆ ಎರಡು ದಿನ ಇರುವಂತೆಯೇ ಅಗತ್ಯ ವಸ್ತುಗಳ ಬೆಲೆ ಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.ಹಬ್ಬದ ಅಂಗವಾಗಿ ಮಂಗಳವಾರದಿಂದಲೇ ಹೂವು-ಹಣ್ಣಿನ ಬೆಲೆಗಳು ಗಗನಕ್ಕೇರಿವೆ. ಪ್ರಮುಖವಾಗಿ ಕನಕಾಂಬರ ಹೂವು ಕೆ.ಜಿ.ಗೆ 1,500 ದಿಂದ 2,000ದ ಗಡಿ ದಾಟಿದೆ. ಹಾಗಾಗಿ `ಕನಕಾಂಬರ' ಸಾಮಾನ್ಯರ ಕೈಗೆಟುಕದೆ ದರ ಅಂಬರಕ್ಕೆ ಜಿಗಿದಿದೆ.
ಇನ್ನು ಮಹಾಲಕ್ಷ್ಮಿಗೆ ಪ್ರಿಯವಾದ ಹೂವು ಕೇದಿಗೆ, ಮಲ್ಲಿಗೆ ಬೆಲೆಯಲ್ಲೂ ಇಳಿಕೆಯಿಲ್ಲ.ಈ ಹೂವುಗಳ ದರವೂ ದುಬಾರಿ. ಗುಂಡು ಮಲ್ಲಿಗೆ ಕೆ.ಜಿ.ಗೆ 500 ಆದರೆ, ಮಳ್ಳೆ ಹೂವು,ಕಾಕಡವೂ 500ಗೆ ಏರಿದೆ. ಪರಿಮಳ ಬೀರುವ ಕೇದಗೆ ಒಂದು ದಿಂಡಿಗೆ 50ರಿಂದ 100ರವರೆಗೆ ಮಾರಾಟವಾಗುತ್ತಿದೆ.ಮಂಗಳವಾರ, ಬುಧವಾರವೇ ಮಾರುಕಟ್ಟೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಆಗಮಿಸಿದ್ದ ಕಾರಣ ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ, ಟೌನ್ ಹಾಲ್ ರಸ್ತೆ, ಗೂಡ್-ಶೆಡ್, ಜೆ.ಸಿ. ರಸ್ತೆ, ಮೈಸೂರು ರಸ್ತೆ ಸೇರಿದಂತೆ ಮಾರುಕಟ್ಟೆ ಸುತ್ತಮುತ್ತಲ ರಸ್ತೆಗಳು ಜನ ಹಾಗೂ ವಾಹನಗಳಿಂದ ಕೂಡಿದ್ದವು. ಇದರಿಂದ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು.
ಈ ನಡುವೆಯೂ ಕೆ.ಆರ್. ಪುರ, ಮಲ್ಲೇಶ್ವರಂ, ಗಾಂಧಿ ಬಜಾರ್, ರಾಜಾಜಿನಗರ, ಹೀಗೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿ ಹಣ್ಣಿನ ದರವೂ ಕಡಿಮೆ ಇಲ್ಲ ಲಕ್ಷ್ಮಿ ಹಬ್ಬಕ್ಕೆ ಹೂವು ಪ್ರಧಾನ ವಸ್ತು.ಅದೇ ರೀತಿ ಹಣ್ಣುಗಳಿಗೂ ಆದ್ಯತೆ
ಇರುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಮಾತ್ರವಲ್ಲ, ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಸೇಬು (ವಿದೇಶಿ, ಸ್ಥಳೀಯ ತಳಿ), ದ್ರಾಕ್ಷಿ, ಕಿತ್ತಳೆ, ಸ್ಟಾರ್ ಫ್ರೂಟ್, ಬಾಳೆಹಣ್ಣು, ಸೀಬೆ, ಸಪೋಟ, ಸೀತಾಫಲ ಹೀಗೆ ವಿವಿಧ ಬಗೆಯ ಹಣ್ಣುಗಳ ಬೆಲೆ ಹೆಚ್ಚಿದೆ. ಕಳೆದ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂ, ಹಣ್ಣುಗಳ ದರ ಕೊಂಚ ಕಡಿಮೆಯಾಗಿಯೇ ಇದೆ. ಹಬ್ಬಕ್ಕೂ ಮುಂಚೆ ಇನ್ನಷ್ಟು ದರ ಹೆಚ್ಚುವ ಸಾಧ್ಯತೆ ಕಡಿಮೆ. ಆದರೆ, ಮಾಮೂಲಿ ದಿನಗಳಿಗಿಂತ ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ ಎನ್ನುತ್ತಾರೆ ಗಾಂಧಿಬಜಾರ್‍ನ ಹಣ್ಣು ಮಾರಾಟಗಾರ ಸಿದ್ದರಾಜು.
ಎರಡು ವಾರಗಳ ಹಿಂದೆ ಮಳೆ ಬಿದ್ದು ಹೂವಿನ ಬೆಳೆ ಹಾಳಾಗಿದೆ. ಶ್ರಾವಣ ಮಾಸದಲ್ಲಿ ಸಾಲುಸಾಲು ಹಬ್ಬಗಳಿರುವ ಕಾರಣ, ಹೂವು ಹಾಗೂ ಹಣ್ಣಿಗೆ ಬೇಡಿಕೆಯೂ ಹೆಚ್ಚಿದೆ. ಅಗತ್ಯತೆಗೆ ತಕ್ಕಂತೆ ಬೆಲೆಯೂ ಹೆಚ್ಚಾಗಿವೆ. ಗುಣಮಟ್ಟ ದ ಹೂವುಹಣ್ಣು ಸಿಗುವುದು ಕಷ್ಟ.
● ವಿಜಯ್ ಹೂವಿನ ವ್ಯಾಪಾರಿ,
ಕೆ.ಆರ್. ಮಾರುಕಟ್ಟೆ
ಪ್ರತಿ ಹಬ್ಬಕ್ಕೂ ಹೂ, ಹಣ್ಣಿನ ದರ ಹೆಚ್ಚುತ್ತದೆ. ಅದೇ ರೀತಿ ಈ ಬಾರಿಯೂ ಹೆಚ್ಚಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಹಬ್ಬ ಸಂಪ್ರದಾಯ,ಆಚಾರ-ವಿಚಾರ ಮುರಿಯಲು ಆಗಲ್ಲ. ನಮ್ಮ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಅಗತ್ಯ ವಸ್ತುಗಳನ್ನು ಖರೀದಿಸಿ ಹಬ್ಬ ಮಾಡುತ್ತೇವೆ.
●ಚಂದ್ರಾವತಿ ಗ್ರಾಹಕರು, ಶ್ರೀನಗರ
Advertisement