
ಬೆಂಗಳೂರು: ಕೋಮುವಾದಿ ಮನಸ್ಸುಗಳು ಮುಸ್ಲಿಮರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದು, ಪ್ರತ್ಯೇಕವಾದಿ ಮನೋಭಾವ ಬೆಳೆಯುತ್ತಿರುವುದು ವಿಷಾದನೀಯ ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಎಂ.ಇಕ್ಬಾಲ್ ಹುಸೇನ್ ರಚಿತ `ಭಾರತೀಯ ಮುಸ್ಲಿಮರು ಒಂದು ಮರು ಚಿಂತನೆ' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ದೇಶ ಭಕ್ತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಸಾಂಸ್ಕೃತಿಕ ಅತ್ಯಾಚಾರ, ಧಾರ್ಮಿಕ ದಬ್ಬಾಳಿಕೆ ನಡೆಯುತ್ತಿದೆ. ದೇಶಭಕ್ತಿ ಎನ್ನುವುದು ಧರ್ಮಾಧಿಕಾರವನ್ನು ಹೊಂದಿರುತ್ತದೆ. ಆದರೆ ದೇಶಪ್ರೇಮ ಹಾಗಲ್ಲ. ವಿಶಾಲ ಜಾತ್ಯತೀತತೆಯಿಂದ ಕೂಡಿರುತ್ತದೆ ಎಂದರು.
ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಡಾ.ಹಂಪ ನಾಗರಾಜಯ್ಯ, ಈ ಪುಸ್ತಕ ಕತೆ, ಕಾದಂಬರಿ ಮಾದರಿಯಲ್ಲಿರದೆ ವಿಶೇಷ ರೀತಿಯಲ್ಲಿ ಮೂಡಿಬಂದಿದೆ. ಸಹಬಾಳ್ವೆ, ಸಮಾಜ ಸುಧಾರಣೆಗೆ ಬೇಕಾದ ಸತ್ವಪೂರ್ಣವಾದ ಕೆಲವೊಂದು ಅಂಶಗಳನ್ನು ಕಾಣಬಹುದು ಎಂದು ಹೇಳಿದರು. ರ್ಯಕ್ರಮಕ್ಕೂ ಮುನ್ನ ಭಾನುವಾರ ಬೆಳಗ್ಗೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸಂಶೋಧಕ, ಸಾಹಿತಿ ಎಂ.ಎಂ. ಕಲಬುರ್ಗಿ ಅವರಿಗೆ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ವಿಚಾರವಾದಿ ಲೇಖಕ ಮಂಗಳೂರು ವಿಜಯ ಮಾತನಾಡಿದರು. ಲೇಖಕ ಎಂ. ಇಕ್ಬಾಲ್ ಹುಸೇನ್, ಕನ್ನಡ ಸಂಘರ್ಷ ಸಮಿತಿಯ ಎಂ. ಪ್ರಕಾಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Advertisement