
ಬೆಂಗಳೂರು: ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿ ವರ್ಷ ಸರ್ಕಾರವೇ ಆಚರಿಸಲಿದೆ ಎಂದು ವಕ್ಫ್ ಸಚಿವ ಖಮರುಲ್ಲಾ ಇಸ್ಲಾಂ ಪುನರುಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಹಜರತ್ ಟಿಪ್ಪು ಸುಲ್ತಾನ್ ವಂಶಸ್ಥರೆನ್ನಲಾದ ಕೆಲವರು ಸಚಿವರನ್ನು ಭೇಟಿ ಮಾಡಿದ್ದರು. ಅವರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ಪ್ರತಿ ವರ್ಷ ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲಿದೆ. ಕನಕ ಜಯಂತಿ, ಬಸವೇಶ್ವರರ ಜಯಂತಿ ಆಚರಿಸುವಾಗ ಟಿಪ್ಪು ಜಯಂತಿ ಏಕೆ ಆಚರಿಸಬಾರದು ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಅಸಹಿಷ್ಣುತೆ ಸೃಷ್ಟಿಸಿದರು. ಅದರಲ್ಲೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸ್ವೀಕರ್ ಕೆ.ಜಿ. ಬೋಪಯ್ಯ ಮಡಿಕೇರಿ ಘಟನೆಗಳಿಗೆ ನೇರ ಹೊಣೆಗಾರರು ಎಂದು ದೂರಿದ ಸಚಿವರು ಮಡಿಕೇರಿ ಘಟನೆಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದರು. ಟಿಪ್ಪು ವಂಶಸ್ಥರೆನ್ನಲಾದ ಶೆಹಸಾದ್ ಇಸ್ಮಾಯಿಲ್ ಷಾ ಸುಲ್ತಾನ್, ಷೇಹಸಾದ ರೆಹಮತ್ ಉನ್ನಿಸಾ, ಸೈಯದ್ ಮಂಚೂದ್ ಅವರನ್ನು ಸಚಿವರು ಸನ್ಮಾನಿಸಿದರು.
Advertisement