ಗಿರವಿ ಚಿನ್ನಾಭರಣ ಜತೆ ಸಿಸಿ ಕ್ಯಾಮೆರಾ ಹೊತ್ತೊಯ್ದರು

ಗಿರವಿ ಅಂಗಡಿಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಆಭರಣಗಳೊಂದಿಗೆ ಸಿಸಿ ಕ್ಯಾಮೆರಾವನ್ನೂ ದೋಚಿ ಪರಾರಿಯಾಗಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗಿರವಿ ಅಂಗಡಿಗೆ ಕನ್ನ ಹಾಕಿರುವ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ  ಆಭರಣಗಳೊಂದಿಗೆ ಸಿಸಿ ಕ್ಯಾಮೆರಾವನ್ನೂ ದೋಚಿ ಪರಾರಿಯಾಗಿರುವ ಘಟನೆ ಬಸವೇಶ್ವರ  ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಶಂಕರಮಠ ವೃತ್ತದ ಕುರುಬರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮಾಂಗಿಲಾಲ್ ಪಾನ್  ಬ್ರೋಕರ್ಸ್ ಗಿರವಿ ಅಂಗಡಿಯಲ್ಲಿ ತಡರಾತ್ರಿ ಈ ಕಳ್ಳತನ ನಡೆದಿದೆ. ಶುಕ್ರವಾರ ಬೆಳಗ್ಗೆ 7.30ರ  ಸುಮಾರಿಗೆ ಮಾಲೀಕ ಮಾಂಗಿಲಾಲ್ ಅಂಗಡಿ ಬಾಗಿಲು ತೆರೆದಾಗ ಕಳ್ಳತನ ವಿಷಯ  ಬೆಳಕಿಗೆ ಬಂದಿದೆ. ಬಳಿಕ ಬಸವೇಶ್ವರ ಪೊಲೀಸ್ ಠಾಣೆಗೆ ತೆರಳಿ  ಪ್ರಕರಣ ದಾಖಲಿಸಿದ್ದಾರೆ.

ಮುಖ್ಯರಸ್ತೆಗೆ ಬಾಗಿಲಿರುವ ಈ ಗಿರವಿ ಅಂಗಡಿಯ ಹಿಂದೆ ವಾಸದ ಮನೆಯಿದೆ.  ಆದರೆ ಕಳೆದ  ಕೆಲ ತಿಂಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಅಂಗಡಿಗೆ ಹೊಂದಿಕೊಂಡಿರುವ  ಕಿರಿದಾದ ದಾರಿಯ ಮೂಲಕ ಈ ಮನೆಗೆ ತೆರಳಬೇಕು. ದುಷ್ಕರ್ಮಿಗಳು ಈ ಕಿರಿದಾದ  ದಾರಿಯಲ್ಲಿ ಸಾಗಿ ಮನೆಯ ಮಹಡಿ ಮೆಟ್ಟಿಲು ಕೆಳಗೆ ಗಿರವಿ ಅಂಗಡಿಗೆ ಕನ್ನ ಕೊರೆದು ಒಳ  ಪ್ರವೇಶಿಸಿ ಚಿನ್ನಾಭರಣ ಹಾಗೂ ಅಂಗಡಿ ಒಳಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೋಚಿ  ಪರಾರಿಯಾಗಿದ್ದಾರೆ  ಎಂದು ಪೊಲೀಸರು ತಿಳಿಸಿದರು. 

ಶಾಸಕರಲ್ಲಿ ಮನವಿ: ಗಿರವಿ ಅಂಗಡಿಯಲ್ಲಿ ಕಳ್ಳತನದ ವಿಷಯ ತಿಳಿದು ಶಾಸಕ ಗೋಪಾಲಯ್ಯ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂತೆಯೇ  ಆಭರಣಗಳನ್ನು ಗಿರವಿ ಇರಿಸಿದ್ದ ಹಲವು ಮಂದಿ ಅಂಗಡಿ ಮುಂದೆ ಜಮಾಯಿಸಿದ್ದರು. ತಮ್ಮ  ಆಭರಣಗಳನ್ನು ಪತ್ತೆ ಮಾಡಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಗಿರವಿ ವೇಳೆ  ಮಾಲೀಕ ನೀಡಿರುವ ರಶೀದಿಯನ್ನು ಜೋಪಾನವಾಗಿರಿಸಿ. ಪೊಲೀಸರು ಕಳ್ಳರನ್ನು ಬಂಧಿಸಿದ ಬಳಿಕ  ಆಭರಣ ವಾಪಸ್ ಪಡೆಯಲು ರಶೀದಿ ಮುಖ್ಯ ಎಂದು ಶಾಸಕರು ತಿಳಿಸಿದರು. ಈ ಸಂಬಂಧ  ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ  ಶೋಧ  ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com