
ಬೆಂಗಳೂರು: ಕಿಸ್ ಆಫ್ ಲವ್ ಕಾರ್ಯಕ್ರಮದ ರೂವಾರಿಗಳಾದ ರಶ್ಮಿ ನಾಯರ್ ಮತ್ತು ರಾಹುಲ್ ಪಶುಪಾಲ್ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಗುರುವಾರ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಗರದ ಯುವತಿಯರನ್ನು ಅನೈತಿಕ ಚುಟುವಟಿಕೆಯಲ್ಲಿ ತೊಡಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆ ಹಿನ್ನೆಲೆಯಲ್ಲಿ ಅವರನ್ನು ನಗರಕ್ಕೆ ಕರೆತರಲಾಗಿದೆ. ಯುವತಿಯರನ್ನು ಅನೈತಿಕ ಚುಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಮೇಲೆ ಇವರನ್ನು ನ.19ರಂದು ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.
ಬೆಂಗಳೂರು ಪ್ರಕರಣದ ವಿಚಾರಣೆ ಸಂಬಂಧ ಇವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಇಲ್ಲಿನ ಪೊಲೀಸರು ಕೇರಳ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ನ್ಯಾಯಲಯ ವಿಚಾರಣೆನಡೆಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಗುರುವಾರ ಆರೋಪಿಗಳನ್ನು ಬೆಂಗಳೂರಿಗೆ ಕರೆ ತಂದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
Advertisement