ಬೆಳಗಾವಿ: ಲಕ್ಷ್ಮಣ ರುಕ್ಮನ್ನೆ ಕಟಂಬಲೆ ಎಂಬ ರೈತನಿಗೆ ಈಗ 73ರ ಹರೆಯ. ಬೆಳಗಾವಿಯ ಕಡೋಳಿ ಜಿಲ್ಲೆಯಲ್ಲಿ ವಾಸವಾಗಿರುವ ಲಕ್ಷ್ಮಣ ಅವರು ಬರೀ ರೈತ ಮಾತ್ರ ಅಲ್ಲ, ಜನ ಸೇವಕ, ಪರೋಪಕಾರಿ ಹಾಗೂ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತ.
ತಮ್ಮ ಮೂರು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಇವರು ಬಡ ಜನರ ಸಹಾಯಕ್ಕೆ ಸದಾ ಸನ್ನದ್ಧರು. ವಾರಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಜಲಪ್ರಳಯವಾದಾಗ ಚೆನ್ನೈ ಸಂತ್ರಸ್ತರಿಗೆ ರು. 5000 ಕೊಟ್ಟು ಧನ ಸಹಾಯ ಮಾಡಿದ್ದಾರೆ.
ಹಲವು ವರ್ಷಗಳಿಂದ ಲಕ್ಷ್ಮಣ ಅವರು ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಬರ ಬಂದಿರುವುದರಿಂದ ಬೆಳೆ ನಾಶವಾಗಿ ರು. 25,000 ಸಾಲ ಪಾವತಿಸುವುದು ಬಾಕಿ ಇದೆ. ತಾನು ಸಾಲದಲ್ಲಿದ್ದರೂ ಇನ್ನೊಬ್ಬರಿಗೆ ಸಹಾಯ ಮಾಡಲು ಇವರು ಯಾವತ್ತೂ ಹಿಂಜರಿಯಲಿಲ್ಲ.
ನನಗೆ ಮಕ್ಕಳಿಲ್ಲ. 5 ವರುಷಗಳ ಹಿಂದೆ ಪತ್ನಿ ತೀರಿ ಹೋದಳು. ನನ್ನ ಖರ್ಚು ಕೂಡಾ ಕಡಿಮೆ. ನನ್ನ ಬದುಕಿನಲ್ಲಿ ನಾನು ಹೆಚ್ಚು ಆಸೆ ಪಟ್ಟವನಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂಬುದೇ ನನ್ನ ಆಸೆ ಅಂತಾರೆ ಈ ರೈತ.
ಪ್ರತೀ ವರ್ಷ ಕಡೋಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಲಕ್ಷ್ಮಣ ಅವರು ರು.1, 5000 ನಗದು ಬಹುಮಾನವನ್ನು ನೀಡುತ್ತಾರೆ. ಅಷ್ಟೇ ಅಲ್ಲ ಅದೇ ಗ್ರಾಮದಲ್ಲಿರವ ಕಮಲೇಶ್ವರ ದೇಗುಲಕ್ಕೆ ರು. 1.22 ಲಕ್ಷ ಬೆಲೆ ಬಾಳುವ ಬೆಳ್ಳಿ ವಿಗ್ರಹವನ್ನೂ ದೇಣಿಗೆಯಾಗಿ ನೀಡಿದ್ದಾರೆ.
ನೇಪಾಳದಲ್ಲಿ ಭೂಕಂಪವಾದಾಗ ಅವರು ರು. 5000 ಕೊಟ್ಟಿದ್ದರು. ಇತ್ತೀಚೆಗೆ ಇವರು ಒಂದು ಕೆಜಿಗಿಂತಲೂ ಹೆಚ್ಚು ತೂಕವಿರುವ ಬೆಳ್ಳಿಯ ಪಾದುಕೆಯೊಂದನ್ನು ಯೆಲ್ಲೂರಿನಲ್ಲಿರುವ ಚಂಗಲೇಶ್ವರಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಈ ಪಾದುಕೆ ಬೆಲೆ ರು.56,000.
ತನ್ನ ಖರ್ಚಿಗೆ ಒಂದಷ್ಟು ದುಡ್ಡು ಮಾತ್ರ ವ್ಯಯ ಮಾಡಿ ಇನ್ನುಳಿದ ದುಡ್ಡನ್ನೆಲ್ಲಾ ಸಮಾಜ ಕಲ್ಯಾಣಕ್ಕಾಗಿ ಬಳಸುವ ಈ ರೈತನಿಗೆ ನಮ್ಮ ಸಲಾಂ.