
ಬೆಂಗಳೂರು: ಬಿಇಎಲ್‍ನ ನಿವೃತ್ತ ಡಿಜಿಎಂ ರಾಜಾರಾಂ ಅವರ ಕೊಲೆ ಪ್ರಕರಣ ಪತ್ತೆ ಹಚ್ಚಿರುವ ವಿದ್ಯಾರಣ್ಯಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಯನಗರ 1ನೇ ಬ್ಲಾಕ್ ಭೈರಸಂದ್ರ ನಿವಾಸಿ ಮಹೇಶ್ (36), ಅಸ್ಸಾಂ ಮೂಲದ ಮೋಹನ್ 23) ಬಂಧಿತರು. ಆಸ್ತಿ ಹಾಗೂ ಹಣದ ಆಸೆಯಿಂದ ವಿದ್ಯಾರಣ್ಯಪುರ ಬಿಇಎಲ್ 1ನೇ ಬ್ಲಾಕ್ ವಾಸಿಯಾದ ಬಿಇಎಲ್ ನಿವೃತ್ತ ಡಿಜಿಎಂ ರಾಜಾರಾಂ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು, ಹಿಂದುಪುರ-ಮಧುಗಿರಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾದ್ದರು.
ನ.13ರಿಂದ ರಾಜಾರಾಂ ಕಾಣೆಯಾರುವ ಬಗ್ಗೆ ಅಣ್ಣ ಶೇಖರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನ.18ರಂದು ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿ ಬಂದಿದೆ.
ಏನಿದು ಘಟನೆ?: ನಿವೃತ್ತ ಡಿಜಿಎಂ ರಾಜಾರಾಂ ಅವರು ಪತ್ನಿ ಪ್ರೇಮಲತಾ ಹಾಗೂ ಮಗಳು ಮಧುವಂತಿ ಜತೆಗೆ ಜಯನಗರ 1ನೇ ಬ್ಲಾಕ್ ಭೈರಸಂದ್ರದಲ್ಲಿ ವಾಸವಿದ್ದರು. 2013ರಲ್ಲಿ ತೀವ್ರ ಅನಾರೋಗ್ಯದಿಂದ ಪ್ರೇಮಲತಾ ಮೃತಪಟ್ಟಿದ್ದರು. ತಾಯಿ ಸಾವಿನ ಆಘಾತದಿಂದ ಹೊರಬರಲಾಗದೆ ಮಗಳು ಮಧುವಂತಿ, ತಂದೆಯಿಂದ ದೂರವಿರಲು ನಿಶ್ಚಯಿಸಿ ಬನ್ನೇರುಘಟ್ಟ ರಸ್ತೆಯ ಬಿಳೇಕಳ್ಳಿಯಲ್ಲಿರುವ ಪ್ರೈಡ್ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು.
ಆಸ್ತಿಯನ್ನು ಮಗಳ ಹೆಸರಿಗೆ ನೋಂದಣಿ ಮಾಡಿಕೊಡುವ ಸಂಬಂಧ ರಾಜಾರಾಂ ಕಳೆದ ಒಂದು ವರ್ಷದಿಂದ ಮಧುವಂತಿಯನ್ನು ಕರೆಯುತ್ತಿದ್ದರು. ಆದರೆ, ಮಧುವಂತಿಗೆ ತಂದೆ ಮೇಲೆ ದ್ವೇಷವಿತ್ತು. ತಾಯಿ ಅನಾರೋಗ್ಯಕ್ಕೆ ತುತ್ತಾದಾಗ ತಂದೆ ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ದ್ವೇಷಿಸುತ್ತಿದ್ದರು. ತಂದೆ ಆಸ್ತಿ ನೋಂದಣಿ ಸಂಬಂಧ ಕರೆದಾಗಲೆಲ್ಲಾ ಬರುವುದಿಲ್ಲ ಎನ್ನುತ್ತಿದ್ದರು. ಅಲ್ಲದೆ, ನಾನು ಕಳುಹಿಸಿಕೊಡುವ ವ್ಯಕ್ತಿಯ ಕೈಗೆ ಆಸ್ತಿ ದಾಖಲೆ ಕೊಟ್ಟು ಕಳುಹಿಸುವಂತೆ ಹೇಳಿದ್ದರು.
ಅದರಂತೆ ತಾನು ವಾಸವಾಗಿದ್ದ ಅಪಾರ್ಟ್ ಮೆಂಟ್‍ನಲ್ಲಿ ಡಿಪಾರ್ಟಮೆಂಟಲ್ ಸ್ಟೋರ್ ಇಟ್ಟುಕೊಂಡಿದ್ದ ಪರಿಚಿತ ಮಹೇಶ್‍ಗೆ ತಂದೆ ಬಳಿ ಹೋಗಿ ದಾಖಲೆ ತೆಗೆದುಕೊಂಡು ಬರುವಂತೆ ಕೋರಿದ್ದರು. ಬಳಿಕ ಮಹೇಶ್ 3 ಬಾರಿ ರಾಜಾರಾಂ ಅವರನ್ನು ಭೇಟಿಯಾಗಿ ದಾಖಲಾತಿ ನೀಡುವಂತೆ ಕೇಳಿದ್ದಾನೆ. ಈತನ ಕೈಯಲ್ಲಿ ದಾಖಲೆ ಕೊಡಲು ರಾಜಾರಾಂ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿ ಕೈಯಲ್ಲಿ ದಾಖಲೆ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಆಸ್ತಿ ಲಪಟಾಯಿಸಲು ಸಂಚು: ಎಷ್ಟೇ ಕೇಳಿದರೂ ರಾಜಾರಾಂ ಆಸ್ತಿ ದಾಖಲೆ ಕೊಟ್ಟು ಕಳುಹಿಸಲು ಒಪ್ಪದಿದ್ದಾಗ ಹೇಗಾದರೂ ಮಾಡಿ ಆಸ್ತಿ ಲಪಟಾಯಿಸಲು ಆರೋಪಿ ಮಹೇಶ್ ಸಂಚು ರೂಪಿಸಲು ಮುಂದಾಗಿದ್ದಾನೆ. ಈ ವೇಳೆ ಅಪಾರ್ಟ್ ಮೆಂಟ್ ಪಕ್ಕದ ನಿರ್ಮಾಣ ಹಂತದಲ್ಲಿದ್ದ ವೈಷ್ಣವಿ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಸ್ಸಾಂಮೂಲದ ಹನ್‍ಗೆ ಹಣದ ಆಮಿಷವೊಡ್ಡಿ ಸಂಚಿಗೆ ಸಾಥ್ ಪಡೆದಿದ್ದಾನೆ.
ಸಂಚಿನ ರೂವಾರಿ ಮಹೇಶ್ ನ.13ರಂದು ಮೋಹನನ್ನು ಕರೆದುಕೊಂಡು ರಾಜಾರಾಂ ಮನೆಗೆ ಹೋಗಿದ್ದಾನೆ. ಆಸ್ತಿಗೆ ಸಂಬಂಧಿಸಿದ ದಾಖಲೆ ನೀಡುವಂತೆ ಬಲವಂತ ಮಾಡಿದ್ದಾನೆ. ಇಬ್ಬರು ಎಷ್ಟೇ ಕೇಳಿದರೂ ರಾಜಾರಾಂ ದಾಖಲೆ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ರಾಜಾರಾಂ ಅವರೊಂದಿಗೆ ಜಗಳಕ್ಕೆ ಇಳಿದ ಮಹೇಶ್ ಗಟ್ಟಿಯಾಗಿ ರಾಜಾರಾಂ ಅವರನ್ನು ಹಿಡಿದಿದ್ದು, ಮೋಹನ್ ಪ್ಯಾನರ್‍ನಿಂದ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ರಾಜಾರಾಂ ರಕ್ತಸ್ರಾವಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಇಬ್ಬರು ಆರೋಪಿಗಳು ರಾಜಾರಾಂ ಅವರ ಕೈ, ಕಾಲು, ತಲೆಗೆ ಗಮ್ ಟೇಪ್ ಸುತ್ತಿ ಶವವನ್ನು ಕಾರಿನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೇ ಮನೆ ಹಾಗೂ ಗೇಟಿಗೆ ಬೀಗ ಜಡಿದು ಕಾರು ಚಲಾಯಿಸಿಕೊಂಡು ಜಾಗ ಖಾಲಿ ಮಾಡಿದ್ದಾರೆ. ಆಂಧ್ರ ಪ್ರದೇಶದ ಹಿಂದುಪುರದ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ತೆಗೆದುಕೊಂಡು ಹಿಂದುಪುರ-ಮಧುಗಿರಿ ರಸ್ತೆಯಲ್ಲಿ ಸಾಗಿದ್ದಾರೆ. ಇಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಶವದ ಗುರುತು ಪತ್ತೆಯಾಗದಂತೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು.
Advertisement