ರಾಜ್ಯದಲ್ಲೀಗ ಎಲ್ಲೆಡೆ ಹೊಸ ಬೆಳಕು

ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಸ್ವಾವಲಂಬನೆ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಹೊಸ ಬೆಳಕು' ಯೋಜನೆಯ...
`ಹೊಸ ಬೆಳಕು' ಯೋಜನೆಗೆ ಚಾಲನೆ (ಕೃಪೆ: ಕೆಪಿಎನ್ )
`ಹೊಸ ಬೆಳಕು' ಯೋಜನೆಗೆ ಚಾಲನೆ (ಕೃಪೆ: ಕೆಪಿಎನ್ )
ಮೈಸೂರು: ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಸ್ವಾವಲಂಬನೆ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ  `ಹೊಸ ಬೆಳಕು' ಯೋಜನೆಯ ಎಲ್‍ಇಡಿ ಬಲ್ಬ್  ವಿತರಣೆ ಮತ್ತು ಜನಜಾಗೃತಿ ಅಭಿಯಾನಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ``ಕೆಲವೇ ವರ್ಷಗಳಲ್ಲಿ ಕರ್ನಾಟಕವನ್ನು ವಿದ್ಯುತ್ ಸ್ವಾವಲಂಬ ನೆಯ ರಾಜ್ಯವನ್ನಾಗಿಸಬೇಕು. ಈಗ ಸೌರವಿದ್ಯುತ್‍ಗೆ ಹೆಚ್ಚಿನ ಗಮನ ನೀಡಿದ್ದೇವೆ. ವಿದ್ಯುತ್ ದುರ್ಬಳಕೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.  ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ.  ಮುಂದಿನ ಮೇ ಅಥವಾ ಜೂನ್ ವೇಳೆಗೆ ರಾಜ್ಯಕ್ಕೆ  ಮತ್ತೆ 2,300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆ  ಆಗಲಿದೆ. ಎಲ್‍ಇಡಿ ಬಲ್ಬ್ ಬಳಕೆಯಿಂದ ರಾಜ್ಯಕ್ಕೆ ವಾರ್ಷಿಕ ರು.450 ರಿಂದ 500 ಕೋಟಿ  ಉಳಿತಾಯವಾಗಲಿದೆ,'' ಎಂದು ತಿಳಿಸಿದರು.  ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯಕ್ಕೆ 6.50 ಕೋಟಿ ಎಲ್‍ಇಡಿ ಬಲ್ಬ್ ಗಳಬೇಡಿಕೆಯನ್ನು ಅಂದಾಜಿಸಲಾಗಿದೆ. ಪ್ರತಿ ಮನೆಗೆ  ರಿಯಾಯಿತಿ  ಬಲ್ಬ್ ವಿತರಿಸಲಾಗುವುದು. ಮೀಟರ್  ರೀಡರ್‍ಗಳು ಅಥವಾ ಲೈನ್‍ಮನ್‍ಗಳು ಈ ಬಲ್ಪ್ ಗಳನ್ನು ಮನೆ ಮನೆಗೆ ವಿತರಿಸುತ್ತಾರೆ. ಗ್ರಾಹಕರು  ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಮಾರಾಟ ಕೇಂದ್ರಗಳನ್ನೂ ತೆರೆಯಲಾಗುವುದು,'' ಎಂದು ಹೇಳಿದರು. ಪದ್ಮ ಪ್ರಶಸ್ತಿ ಶಿಫಾರಸು ಪಟ್ಟಿ ವಿಳಂಬವಾಗಿಲ್ಲ  ``ಪದ್ಮ ಪ್ರಶಸ್ತಿಗಳಿಗೆ ರಾಜ್ಯ ಸರ್ಕಾರದಿಂದ ಗಣ್ಯರ ಹೆಸರು ಶಿಫಾರಸು ಮಾಡುವಲ್ಲಿ ಯಾವುದೇ ವಿಳಂಬವಾಗಿಲ್ಲ. ಸರ್ಕಾರದಿಂದ ಸಕಾಲದಲ್ಲಿ ಪಟ್ಟಿ ರವಾನಿಸಲಾಗಿದೆ. ಅಲ್ಲದೆ, ರಾಜ್ಯದ ಪಟ್ಟಿಯನ್ನು  ಕೇಂದ್ರ ಪರಿಗಣಿಸುವ ವಿಶ್ವಾಸವಿದೆ,'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
20 ಸ್ಥಾನ ಗಳಿಸುವ ವಿಶ್ವಾಸ: ಸ್ಥಳೀಯ ಸಂಸ್ಥೆಗಳಿಂದ  ಮೇಲ್ಮನೆಗೆ ಡಿ.27 ರಂದು ನಡೆಯಲಿರುವ  ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ  ವ್ಯಕ್ತಪಡಿಸಿದ್ದಾರೆ. ಮೈಸೂರಿನ ಲಲಿತಮಹಲ್  ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ``ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಈ ಪೈಕಿ ಧಾರವಾಡ ದ್ವಿಸದಸ್ಯ ಕ್ಷೇತ್ರದ ಅಭ್ಯರ್ಥಿಯಿಂದ  ನಾಮಪತ್ರ ವಾಪಸ್ ತೆಗೆಸಲಾಗುವುದು. ಈ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ'' ಎಂದು ಅವರು ತಿಳಿಸಿದ್ದಾರೆ.
21ಕ್ಕೆ ಲೋಕಾಯುಕ್ತ ಚರ್ಚೆ: ಲೋಕಾಯುಕ್ತ  ಮತ್ತು ಉಪಲೋಕಾಯುಕ್ತ ಕುರಿತು ಮಾತನಾಡಿರುವ ಸಿಎಂ, ``ಉಪ ಲೋಕಾಯುಕ್ತ ಸ್ಥಾನಕ್ಕೆ ಎಲ್.
ಆನಂದ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. 21 ರ ಸಭೆಯಲ್ಲಿ ಲೋಕಾಯುಕ್ತರ ಕುರಿತು ಚರ್ಚಿಸಲಾಗುವುದು. ಲೋಕಾಯುಕ್ತರಾಗಿದ್ದ ನ್ಯಾ. ಭಾಸ್ಕರರಾವ್ ರಾಜಿನಾಮೆ ನೀಡಿದ್ದರಿಂದ ಅವರ ಪದಚ್ಯುತಿ ಪ್ರಸ್ತಾವ ಈಗ ಅಪ್ರಸ್ತುತ. ಆದರೆ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಪದಚ್ಯುತಿ ಗೆ ಮತ್ತಷ್ಟು ದಾಖಲೆಗಳನ್ನು ಒದಗಿಸಲಾಗುವುದು,'' ಎಂದು ಹೇಳಿದರು.
ಬಲ್ಪ್ ವಿಶೇಷತೆ
- ರು. 100; ಒಂದು  ಎಲ್‍ಇಡಿ ಬಲ್ಬ್ ಬೆಲೆ
- 1.5 ಕೋಟಿ; ರಾಜ್ಯದ ಇಷ್ಟು  ಬಳಕೆದಾರರಿಗೆ ಬಲ್ಬ್ ಪೂರೈಸುವ ಗುರಿ
- 6 ಕೋಟಿ : ಇಷ್ಟು ಬಲ್ಬ್‍ಗಳನ್ನು ರಾಜ್ಯದಲ್ಲಿ ವಿತರಿಸುವ ಉದ್ದೇಶ
- 1287 ಮೆಗಾ ಯೂನಿಟ್; ಎಲ್‍ಇಡಿ ಬಳಕೆಯಿಂದ ಉಳಿತಾಯವಾಗಲಿರುವ ವಿದ್ಯುತ್
- ರು. 450 ಕೋಟಿ - ವಾರ್ಷಿಕ ಉಳಿತಾಯ
- ಒಂದು 9 ವ್ಯಾಟ್‍ನ ಎಲ್‍ಇಡಿ ಬಲ್ಪ್ 60 ವ್ಯಾಟ್ಸ್‍ನ ಬುರುಡೆ ಬಲ್ಬ್ ಅಥವಾ 14
ವ್ಯಾಟ್ಸ್‍ನ ಸಿಎಫ್ ಎಲ್ ಬಲ್ಬ್‍ಗೆ ಸಮ
-ಶೇ. 40 ರಿಂದ 45 ರಷ್ಟು ವಿದ್ಯುತ್  ಉಳಿತಾಯ 
- ಈ ಬಲ್ಬ್ ಗಳು ಬೀಳಿಸಿದರೂ ಒಡೆಯುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com