
ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್ ಸೂಚಿಸಿದ್ದ ಪರಿಹಾರ ನಿಯಮಗಳನ್ನು ಟೆಲಿಕಾಂ ಆಪರೇಟರ್ ಗಳು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಡಿ.14 ರಂದು ಕೇಂದ್ರ ಸರ್ಕಾರ ಹಾಗೂ ಟ್ರಾಯ್ ನಿಂದ ಪ್ರತಿಕ್ರಿಯೆ ಕೇಳಿದೆ.
2016 ರ ಜನವರಿಯಿಂದ ಟ್ರಾಯ್ ಸೂಚಿಸಿರುವ ಕಾಲ್ ಡ್ರಾಪ್ ಪರಿಹಾರ ನಿಯಮಗಳು ಜಾರಿಗೆ ಬರಲಿದ್ದು, ಪ್ರತಿ ಬಾರಿ ಕಾಲ್ ಡ್ರಾಪ್ ಸಮಸ್ಯೆ ಎದುರಿಸಿದ್ದ ಗ್ರಾಹಕರಿಗೆ 1 ರೂಪಾಯಿ ಪರಿಹಾರ ಧನ ನೀಡಬೇಕಾಗುತ್ತದೆ. ಈ ಪರಿಹಾರ ಮೂರು ಕಾಲ್ ಡ್ರಾಪ್ ಗಳಿಗೆ ಮಾತ್ರ ಅನ್ವಯವಾಗಲಿದೆ.
ಟ್ರಾಯ್ ವಿಧಿಸಿರುವ ನಿಯಮಗಳನ್ನು ವಿರೋಧಿಸಿ ಟೆಲಿಕಾಂ ಸಂಸ್ಥೆಗಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಟೆಲಿಕಾಂ ಸಂಸ್ಥೆಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿ.22 ರೊಳಗೆ ಪ್ರತಿಕ್ರಿಯೆ ನೀಡುವಂತೆ ಟ್ರಾಯ್ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನಿಯಮಗಳ ಪ್ರಕಾರ ನೆಟ್ವರ್ಕ್ ಸೌಲಭ್ಯ ಒದಗಿಸಲು ಟೆಲಿಕಾಮ್ ಆಪರೇಟರ್ ಗಳು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಲ್ ಡ್ರಾಪ್ ಸಮಸ್ಯೆ ಎದುರಾಗುವುದಕ್ಕೆ ಕಾರಣವನ್ನು ಟ್ರಾಯ್ ಸರಿಯಾಗಿ ವಿವರಿಸಿಲ್ಲ, ಅಲ್ಲದೇ ಗ್ರಾಹಕರಿಗೆ ಪರಿಹಾರ ನೀಡಲು ಟ್ರಾಯ್ ಕಾಯ್ದೆಯಲ್ಲಿ ಟ್ರಾಯ್ ಗೆ ಅಧಿಕಾರವಿಲ್ಲ. ಎಂದು ಟೆಲಿಕಾಮ್ ಆಪರೇಟರ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದು ಅಕ್ಟೋಬರ್ 16 ರಂದು ಟ್ರಾಯ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಸೆಲ್ಯೂಲರ್ ಆಪರೇಟರ್ ಗಳು ಕೋರ್ಟ್ ಗೆ ಮನವಿ ಮಾಡಿವೆ.
Advertisement